

ನವದೆಹಲಿ: ಬುಡಾಪೆಸ್ಟ್ನಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್ನಲ್ಲಿ ಸ್ವರ್ಣ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಪುರುಷರ ಮತ್ತು ಮಹಿಳಾ ತಂಡದ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತನ್ನ ನಿವಾಸದಲ್ಲಿ ಭೇಟಿಯಾದರು. ಈ ವೇಳೆ ಆಟಗಾರರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಅವರ ಅಪೂರ್ವ ಸಾಧನೆಗಾಗಿ ಶ್ಲಾಘಿಸಿ ಅಭಿನಂದಿಸಿದರು. ಭೇಟಿಯ ವೇಳೆ ಭಾರತ ತಂಡದ ಆಟಗಾರ&ಆಟಗಾರ್ತಿಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೆಸ್ ಬೋರ್ಡ್ ಒಂದನ್ನು ಉಡುಗೊರೆಯಾಗಿ ನೀಡಿದರು.
ಒಟ್ಟು 11 ಸುತ್ತುಗಳಲ್ಲಿ ನಡೆದ ಕೂಟದಲ್ಲಿ ಭಾರತದ ಪುರುಷರ ತಂಡ ಅಜೇಯವಾಗಿ ಪದಕಕ್ಕೆ ಮುತ್ತಿಟ್ಟರೆ, ಮಹಿಳಾ ತಂಡ ಒಂದು ಪಂದ್ಯವನ್ನಷ್ಟೇ ಸೋತಿತ್ತು. ಉಭಯ ತಂಡಗಳು ಮೊಟ್ಟಮೊದಲ ಬಾರಿಗೆ ಸ್ವರ್ಣ ಪದಕ ಒಲಿಸಿಕೊಂಡವು. ಭಾರತ ಪುರುಷರ ತಂಡದ ಆಟಗಾರರಾದ ಡಿ. ಗುಕೇಶ್, ಆರ್. ಪ್ರಜ್ಞಾನಂದ, ವಿದಿತ್ ಗುಜರಾತಿ, ಅರ್ಜುನ್ ಇರಿಗೈಸಿ, ನಾಯಕ ಶ್ರೀನಾಥ್ ನಾರಾಯಣನ್, ಮಹಿಳಾ ತಂಡದ ಆಟಗಾರ್ತಿಯರಾದ ದ್ರೋಣವಲ್ಲಿ ಹರಿಕಾ, ಆರ್. ವೈಶಾಲಿ, ದಿವ್ಯಾ ದೇಶ್ಮುಖ್, ತಾನಿಯಾ ಸಚ್ದೇವ್, ವಂತಿಕಾ ಅಗರ್ವಾಲ್, ನಾಯಕ: ಅಭಿಜಿತ್ ಕುಂಟೆ ಎರಡು ಸಾಲುಗಳಲ್ಲಿ ಕುಳಿತುಕೊಂಡು ಮೋದಿ ಜತೆಗೆ ಸಂವಾದದಲ್ಲೂ ಭಾಗವಹಿಸಿದರು.
ಮೋದಿ ಎದುರು ಚೆಸ್ ಆಟ!
ಭಾರತ ತಂಡದ ಆಟಗಾರರಾದ ಆರ್. ಪ್ರಜ್ಞಾನಂದ ಮತ್ತು ಅರ್ಜುನ್ ಇರಿಗೈಸಿ ಪ್ರಧಾನಿ ಮೋದಿ ಎದುರಲ್ಲೇ ರ್ಯಾಪಿಡ್ ಚೆಸ್ ಪಂದ್ಯವೊಂದನ್ನು ಆಡಿದರು. ಈ ವೇಳೆ ಅವರು ಮೋದಿ ಜತೆಗೆ ವೃತ್ತಿಪರ ಚೆಸ್ ಆಟದ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
3.2 ಕೋಟಿ ರೂ. ಬಹುಮಾನ
ಚೆಸ್ ಒಲಿಂಪಿಯಾಡ್ ಸ್ವರ್ಣ ಗೆದ್ದ ಭಾರತ ತಂಡಕ್ಕೆ ಅಖಿಲ ಭಾರತ ಚೆಸ್ ಒಕ್ಕೂಟ (ಎಐಸಿಎ್) ಒಟ್ಟು 3.2 ಕೋಟಿ ರೂ. ಬಹುಮಾನ ಘೋಷಿಸಿದೆ. ಪುರುಷ&ಮಹಿಳಾ ತಂಡದ ಎಲ್ಲ ಆಟಗಾರ&ಆಟಗಾರ್ತಿಯರು ತಲಾ 25 ಲಕ್ಷ ರೂ. ಪಡೆದರೆ, ಕೋಚ್&ನಾಯಕರಾದ ಅಭಿಜಿತ್ ಕುಂಟೆ, ಶ್ರೀನಾಥ್ ನಾರಾಯಣನ್ ತಲಾ 15 ಲಕ್ಷ ರೂ. ಗಳಿಸಲಿದ್ದಾರೆ. ತಂಡದ ಮುಖ್ಯಸ್ಥರಾದ ಗ್ರಾಂಡ್ಮಾಸ್ಟರ್ ದಿವ್ಯೇಂದು ಬರುವಾ 10 ಲಕ್ಷ ರೂ. ಮತ್ತು ಇತರ ಸಹಾಯಕ ಕೋಚ್ಗಳು ತಲಾ 7.5 ಲಕ್ಷ ರೂ. ಪಡೆಯಲಿದ್ದಾರೆ.