

ಪ್ಯಾರಿಸ್: ಸ್ಪೇನ್ ುಟ್‌ಬಾಲ್ ತಂಡದ ಮಿಡ್‌ಫೀಲ್ಡರ್‌ಗಳಾದ ರೋಡ್ರಿ ಮತ್ತು ಐತಾನಾ ಬೊನ್ಮಾತಿ ವಿಶ್ವದ ಅತ್ಯುತ್ತಮ ಕಾಲ್ಚೆಂಡು ಆಟಗಾರರಿಗೆ ನೀಡಲಾಗುವ ಬ್ಯಾಲನ್ ಡಿಓರ್ ಪ್ರಶಸ್ತಿಯನ್ನು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಗೆದ್ದುಕೊಂಡಿದ್ದಾರೆ. ಮ್ಯಾಂಚೆಸ್ಟರ್ ಸಿಟಿ ತಂಡದ ಆಟಗಾರನೂ ಆಗಿರುವ ರೋಡ್ರಿ ಇದೇ ಮೊದಲ ಬಾರಿಗೆ ಬ್ಯಾಲನ್ ಡಿಓರ್ ಪ್ರಶಸ್ತಿಗೆ ಭಾಜನರಾಗಿದ್ದು, ಬ್ರೆಜಿಲ್‌ನ ವಿನಿಶಿಯಸ್ ಜೂನಿಯರ್ ಹಾಗೂ ಇಂಗ್ಲೆಂಡ್‌ನ ಜೂಡ್ ಬೆಲ್ಲಿಂಗ್‌ಹ್ಯಾಮ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.
ಈ ಪ್ರಶಸ್ತಿಯನ್ನು ಒಟ್ಟಾರೆ 13 ಬಾರಿ ಹಂಚಿಕೊಂಡಿರುವ ಮೆಸ್ಸಿ (8), ಕ್ರಿಶ್ಚಿಯಾನೊ ರೊನಾಲ್ಡೊ (5) ಈ ಬಾರಿಯ ಪ್ರಶಸ್ತಿ ರೇಸ್‌ನಲ್ಲಿರಲಿಲ್ಲ. 2003ರ ಬಳಿಕ ಈ ಇಬ್ಬರೂ ಆಟಗಾರರು ರೇಸ್‌ನಲ್ಲಿ ಕಾಣಿಸಿಕೊಳ್ಳದ ಮೊದಲ ದೃಷ್ಟಾಂತ ಇದಾಗಿದೆ. 28 ವರ್ಷದ ರೋಡ್ರಿ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ತಂಡ ಸತತ 4ನೇ ಬಾರಿ ಹಾಗೂ ಯೂರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪೇನ್ ತಂಡ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಪಾದದ ಗಾಯಕ್ಕೆ ತುತ್ತಾಗಿರುವ ರೋಡ್ರಿ ಊರುಗೋಲಿನ ಸಹಾಯದಿಂದಲೇ ಸಮಾರಂಭಕ್ಕೆ ಆಗಮಿಸಿ ಪ್ರಶಸ್ತಿ ಸ್ವೀಕರಿಸಿದರು. 1990ರಲ್ಲಿ ಲೋಥರ್ ಮ್ಯಾಥೌಸ್ ನಂತರ ಬ್ಯಾಲನ್ ಡಿಓರ್ ಗೆದ್ದ ಮೊದಲ ರಕ್ಷಣಾ ವಿಭಾಗದ ಮಿಡ್‌ಫೀಲ್ಡರ್ ಎನಿಸಿರುವ ರೋಡ್ರಿ, ಆಲ್ಫ್ರೆಡೊ ಡಿ ಸ್ಟೆಫಾನೊ (1957,1959) ಮತ್ತು ಲೂಯಿಸ್ ಸೌರೆಜ್ (1960) ನಂತರ ಪ್ರಶಸ್ತಿ ಗೆದ್ದ ಮೂರನೇ ಸ್ಪೇನ್ ಆಟಗಾರ ಎನಿಸಿದ್ದಾರೆ.
ಮಹಿಳಾ ವಿಭಾಗದಲ್ಲಿ ಸ್ಪೇನ್‌ನ ಐತಾನಾ ಬೋನ್ಮತಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಪಡೆದುಕೊಂಡರು. ಬಾರ್ಸಿಲೋನಾ ಮಿಡ್‌ಫೀಲ್ಡರ್ ಆಗಿರುವ 26 ವರ್ಷದ ಐತಾನಾ ಬೊನ್ಮತಿ ಲಿಗಾ ಎಫ್ ಟ್ರೋಫಿ ಮತ್ತು ಮಹಿಳಾ ಚಾಂಪಿಯನ್ಸ್ ಲೀಗ್ ಚಾಂಪಿಯನ್ ಎನಿಸಿದ್ದಾರೆ. ಫ್ರಾನ್ಸ್ ಫುಟ್‌ಬಾಲ್ ನಿಯತಕಾಲಿಕೆ 1956ರಿಂದ ಪುರುಷರಿಗೆ ಮತ್ತು 2018ರಿಂದ ಮಹಿಳೆಯರಿಗೆ ಬ್ಯಾಲನ್ ಡಿಓರ್ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. ಫಿಾ ರ‌್ಯಾಂಕಿಂಗ್‌ನಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆದಿರುವ ಪ್ರತಿ ದೇಶದ ಒಬ್ಬ ಪತ್ರಕರ್ತರು ಇದಕ್ಕೆ ಮತ ಚಲಾಯಿಸುತ್ತಾರೆ.
ದೂರವುಳಿದ ರಿಯಲ್ ಮ್ಯಾಡ್ರಿಡ್: ಪ್ರಶಸ್ತಿ ರೇಸ್‌ನಲ್ಲಿದ್ದ ರಿಯಲ್ ಮ್ಯಾಡ್ರಿಡ್‌ನ ವಿನಿಶಿಯಸ್ ಜೂನಿಯರ್,ಜೂಡ್ ಬೆಲ್ಲಿಂಗ್‌ಹ್ಯಾಮ್ ಹಾಗೂ ಡ್ಯಾನಿ ಕಾರ್ವಾಜಾಲ್ ಸಮಾರಂಭದಿಂದ ದೂರವುಳಿದರು. ವರ್ಷದ ಕೋಚ್ ಪ್ರಶಸ್ತಿ ಪಡೆದ ಕಾರ್ಲೋ ಅನ್ಸೆಲೋಟ್ಟಿ ಸಹ ಗೈರಾದರು. ಪ್ರಶಸ್ತಿ ರೇಸ್‌ನಲ್ಲಿ ವಿನಿಶಿಯಸ್ ಹಾಗೂ ಬೆಲ್ಲಿಂಗ್‌ಹ್ಯಾಮ್ ಕ್ರಮವಾಗಿ 2, 3ನೇ ಸ್ಥಾನ ಪಡೆದುಕೊಂಡರು. ವಿನಿಶಿಯಸ್ 2023-24ರ ಋತುವಿನಲ್ಲಿ ಮ್ಯಾಡ್ರಿಡ್ ಪರ 39 ಪಂದ್ಯಗಳಲ್ಲಿ 24 ಗೋಲು ಮತ್ತು 11 ಗೋಲುಗಳಿಗೆ ಸಹಾಯಕರಾಗಿದ್ದರೂ, ಬ್ಯಾಲನ್ ಡಿಓರ್ ಗೆಲ್ಲುವುದಿಲ್ಲ ಎಂಬ ವರದಿಗಳು ಕಾರ್ಯಕ್ರಮದ ಮೊದಲು ಸೋರಿಕೆಯಾಗಿದ್ದರಿಂದ ರಿಯಲ್ ಮ್ಯಾಡ್ರಿಡ್ ಕಾರ್ಯಕ್ರಮವನ್ನು ಬಹಿಷ್ಕರಿಸಿತು. ಬ್ಯಾಲನ್ ಡಿಓರ್ ಪ್ರಶಸ್ತಿ ಮಾನದಂಡಗಳು ಯುಇಎಫ್‌ಎ ರಿಯಲ್ ಮ್ಯಾಡ್ರಿಡ್ ಅನ್ನು ಗೌರವಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ರಿಯಲ್ ಮ್ಯಾಡ್ರಿಡ್ ಅನ್ನು ಗೌರವಿಸದ ಸ್ಥಳಕ್ಕೆ ನಾವೂ ಹೋಗುವುದಿಲ್ಲ ಎಂದು ಮ್ಯಾಡ್ರಿಡ್ ತಂಡ ತಿಳಿಸಿದೆ.