

ಸಿಡ್ನಿ: ಚೇತೋಹಾರಿ ನಿರ್ವಹಣೆಯೊಂದಿಗೆ ಮಹಿಳೆಯರ ಫಿಫಾ ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿಗೆ ಫೈನಲ್ಗೇರಿರುವ ಸ್ಪೇನ್ ಮತ್ತು ಇಂಗ್ಲೆಂಡ್ ತಂಡಗಳು ಭಾನುವಾರ ಪ್ರಶಸ್ತಿ ಸುತ್ತಿನ ಹೋರಾಟ ನಡೆಸಲಿವೆ. ಯಾವುದೇ ತಂಡ ಗೆದ್ದರೂ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಜಯಿಸಿದ ಸಾಧನೆ ಮಾಡಲಿದೆ.
ಸ್ಪೇನ್ ತಂಡ ಅಂತಿಮ 4ರ ಘಟ್ಟ ದಾಟಿ ಬಂದಿರುವುದು ಇದೇ ಮೊದಲಾಗಿದ್ದರೆ, ಇಂಗ್ಲೆಂಡ್ ತಂಡ ಒಂದು ಬಾರಿ (2015) 3ನೇ ಸ್ಥಾನ ಅಲಂಕರಿಸಿದ್ದೇ ಇದುವರೆಗಿನ ಶ್ರೇಷ್ಠ ಸಾಧನೆ ಎನಿಸಿತ್ತು. ಟೂರ್ನಿಗೆ ಮುನ್ನ ಪ್ರಮುಖ ಆಟಗಾರ್ತಿಯರ ಗಾಯದ ಸಮಸ್ಯೆ ಎದುರಿಸಿದ್ದ ಇಂಗ್ಲೆಂಡ್, ನಂತರ ನಾಕೌಟ್ ಹಂತದಲ್ಲಿ ಪ್ರಮುಖ ಗೋಲು ಸ್ಕೋರರ್ ಲೌರೆನ್ ಜೇಮ್ಸ್ ರೆಡ್ ಕಾರ್ಡ್ ಪಡೆದ ಕಾರಣ ಅವರ ಅಲಭ್ಯತೆಯ ಹಿನ್ನಡೆ ಎದುರಿಸಿತ್ತು. ಇದರ ನಡುವೆಯೂ 2022ರ ಯುರೋಪಿಯನ್ ಚಾಂಪಿಯನ್ ಇಂಗ್ಲೆಂಡ್ ಈಗ ವಿಶ್ವ ಕಿರೀಟದ ಮೇಲೆ ಕಣ್ಣು ನೆಟ್ಟಿದೆ.
ಜರ್ಮನಿ ಇದುವರೆಗೆ ಪುರುಷರ ಮತ್ತು ಮಹಿಳೆಯರ ಫಿಾ ವಿಶ್ವಕಪ್ ಗೆದ್ದಿರುವ ಏಕೈಕ ದೇಶವಾಗಿದೆ. ಸ್ಪೇನ್-ಇಂಗ್ಲೆಂಡ್ ನಡುವೆ ಗೆದ್ದವರಿಗೆ ಆ ಸಾಧನೆಯನ್ನೂ ಸರಿಗಟ್ಟುವ ಅವಕಾಶವಿದೆ.
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಡಿಡಿ ಸ್ಪೋರ್ಟ್ಸ್