ಅಜೇಯವಾಗಿ ಪ್ರಶಸ್ತಿ ಸುತ್ತಿಗೇರಿದ ಸ್ಪೇನ್: ಸೆಮೀಸ್‌ನಲ್ಲಿ ಮುಗ್ಗರಿಸಿದ ಫ್ರಾನ್ಸ್

New-Project-1-6
Published on

ಮ್ಯೂನಿಚ್: ದಾಖಲೆಯ 4ನೇ ಪ್ರಶಸ್ತಿಯ ಹಂಬಲದಲ್ಲಿರುವ ಸ್ಪೇನ್ ತಂಡ ಪ್ರತಿಷ್ಠಿತ ಯುರೋ ಕಪ್ ುಟ್‌ಬಾಲ್ ಟೂರ್ನಿಯಲ್ಲಿ 12 ವರ್ಷಗಳ ಬಳಿಕ ಫೈನಲ್‌ಗೇರಿದೆ. 16 ವರ್ಷದ ಲ್ಯಾಮಿನ್ ಯಮಲ್ (21ನೇ ನಿಮಿಷ) ಹಾಗೂ ಡ್ಯಾನಿ ಓಲ್ಮೊ (25) ಸಿಡಿಸಿದ ಗೋಲುಗಳ ನೆರವಿನಿಂದ ಸ್ಪೇನ್ ತಂಡ ಮಂಗಳವಾರ ರಾತ್ರಿ ನಡೆದ ಮೊದಲ ಸೆಮಿೈನಲ್‌ನಲ್ಲಿ ಫ್ರಾನ್ಸ್ ಎದುರು 2-1 ಅಂತರದಿಂದ ಗೆಲುವು ದಾಖಲಿಸಿದೆ. ಲಾ ರೋಜಾ ಖ್ಯಾತಿಯ ಸ್ಪೇನ್ ಭಾನುವಾರ ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ ಅಥವಾ ನೆದರ್ಲೆಂಡ್ ಎದುರು ಸೆಣಸಾಡಲಿದೆ.

ಪ್ರಶಸ್ತಿ ಫೇವರಿಟ್ ಎನಿಸಿರುವ ಸ್ಪೇನ್ ತಂಡ ಆರಂಭಿಕ ಹಿನ್ನಡೆ ಎದುರಿಸಿತು. ಪಂದ್ಯದ 9ನೇ ನಿಮಿಷದಲ್ಲಿ ಕೈಲಿಯಾನ್ ಎಂಬಾಪೆ ನೀಡಿದ ಪಾಸ್ ಅನ್ನು ಗೋಲು ಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದ ರಾಂಡಲ್ ಕೊಲೊ ಮುವಾನಿ ಫ್ರಾನ್ಸ್‌ಗೆ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ 21ನೇ ನಿಮಿಷದಲ್ಲಿ ಲ್ಯಾಮಿನ್ ಯಮಲ್ ಸಿಡಿಸಿದ ಅದ್ಭುತ ಗೋಲು ಸ್ಪೇನ್‌ಗೆ ಸಮಬಲ ತಂದುಕೊಟ್ಟಿತು. 24ನೇ ನಿಮಿಷದಲ್ಲಿ ಡ್ಯಾನಿ ಓಲ್ಮೊ ಸ್ಪೇನ್‌ಗೆ ಮುನ್ನಡೆ ಒದಗಿಸಿದರು. 4 ನಿಮಿಷದ ಅಂತರದಲ್ಲಿ 2 ಗೋಲು ದಾಖಲಿಸಿದ ಸ್ಪೇನ್ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಇದರೊಂದಿಗೆ ಸ್ಪೇನ್ ಟೂರ್ನಿಯ ಎಲ್ಲ ಪಂದ್ಯಗಳನ್ನು ಗೆದ್ದು 13 ಗೋಲು ಗಳಿಸಿದ ಏಕೈಕ ತಂಡ ಎನಿಸಿತು.

ಫ್ರಾನ್ಸ್‌ನ ಆರಂಭಿಕ ಲೀಗ್ ಪಂದ್ಯದಲ್ಲಿ ಮೂಗು ಮುರಿತಕ್ಕೆ ಒಳಗಾಗಿದ್ದ ಎಂಬಾಪ್ಪೆ, ಮುಖಗವಸು ಧರಿಸದೆ ಸೆಮೀಸ್‌ನಲ್ಲಿ ಕಣಕ್ಕಿಳಿದರು. ಡ್ಯಾನಿ ಓಲ್ಮೊ ಸತತ ಮೂರು ಯುರೋ ಪಂದ್ಯಗಳಲ್ಲಿ ಗೋಲು ಸಿಡಿಸಿದ ಸ್ಪೇನ್‌ನ ಮೊದಲ ಆಟಗಾರ ಎನಿಸಿದರೆ, ಪೆನಾಲ್ಟಿ ಶೂಟೌಟ್ ಇಲ್ಲದೆ ಟೂರ್ನಿಯಲ್ಲಿ ಸತತ ಆರು ಪಂದ್ಯ ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಸ್ಪೇನ್ ಪಾತ್ರವಾಯಿತು.

‘‘ಗೋಲು ಪೆಟ್ಟಿಗೆ ಮೇಲಿನ ಮೂಲೆಯನ್ನು ನಿಖರವಾಗಿ ಗುರಿಯಾಗಿಸಿಕೊಂಡಿದ್ದೆ. ಜತೆಗೆ ಏನಾಗುತ್ತಿದೆ ಎಂಬುದರ ಕುರಿತು ಹೆಚ್ಚು ಯೋಚಿಸದಿರಲು ಪ್ರಯತ್ನಿಸುತ್ತೇನೆ. ಆಟವನ್ನು ಆನಂದಿಸುವುದರ ಜತೆಗೆ,ತಂಡಕ್ಕೆ ಸಹಾಯ ಮಾಡಲು ಬಯಸುತ್ತೇನೆ. ಟೂರ್ನಿಯ ಎಲ್ಲ ಪಂದ್ಯಗಳನ್ನು ಗೆಲ್ಲಲು ಇಲ್ಲಿಗೆ ಬಂದಿದ್ದೇನೆ. ಇದರಿಂದ ಜನ್ಮದಿನವನ್ನು ಜರ್ಮನಿಯಲ್ಲಿ ತಂಡದ ಸಹ ಆಟಗಾರರೊಂದಿಗೆ ಆಚರಿಸಬಹುದು!’ ಎಂದು ಪಂದ್ಯಶ್ರೇಷ್ಠ ಲಾಮಿನೆ ಯಮಾಲ್ ಪಂದ್ಯದ ಬಳಿಕ ನುಡಿದರು.

16: ಲ್ಯಾಮಿನ್ ಯಮಲ್ (16 ವರ್ಷ, 362 ದಿನ) ಯುರೋಕಪ್-ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ಸಿಡಿಸಿದ ಕಿರಿಯ ಆಟಗಾರ ಎನಿಸಿದರು. ಬ್ರೆಜಿಲ್‌ನ ದಂತಕಥೆ ಪೀಲೆ (17 ವರ್ಷ, 239 ದಿನ) ಸಾಧನೆ ಮುರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net