

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾ ಅವರ ಅಧಿಕಾರಾವಧಿ ವಿಸ್ತರಣೆಯ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಎರಡು ವಾರಗಳ ಮುಂದೂಡಿದೆ. ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾಯಮೂರ್ತಿ ಲೋಧಾ ಸಮಿತಿಯ ಕೂಲಿಂಗ್-ಆಫ್ ನಿಯಮದ ಪ್ರಕಾರ, ಗಂಗೂಲಿ ಹಾಗೂ ಜಯ್ ಷಾ ತಮ್ಮ ಹುದ್ದೆಗಳಲ್ಲಿ ಮುಂದುವರಿಯುವಂತಿಲ್ಲ. ಇದರ ಜತೆಗೆ ಮಂಡಳಿಯ ಕೆಲವೊಂದು ಕಾನೂನು ತಿದ್ದುಪಡಿ ಬಗ್ಗೆ ಡಿಸೆಂಬರ್ 1 ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಬಿಸಿಸಿಐ ಆಡಳಿತಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಬದಲಾವಣೆ ಮಾಡಿಕೊಂಡಿತ್ತು. ಜತೆಗೆ ಗಂಗೂಲಿ ಹಾಗೂ ಷಾ ಅವರನ್ನು ತಮ್ಮ ಸ್ಥಾನಗಳಲ್ಲಿ ಮುಂದುವರಿಯುವಂತೆ ಕೋರಿ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಸುಪ್ರೀಂ ಕೋರ್ಟ್‌ಗೆ ಏಪ್ರಿಲ್ 21 ರಂದು ಅರ್ಜಿ ಸಲ್ಲಿಸಿದ್ದರು.
ಬಿಸಿಸಿಐ ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಸುಪ್ರೀಂ ಕೋರ್ಟ್
ಮುಖ್ಯ ನ್ಯಾಯಮೂರ್ತಿ ಶರದ್ ಬೊಡ್ಬೆ ಹಾಗೂ ಎಲ್.ನಾಗೇಶ್ವರ್ ರಾವ್ ಒಳಗೊಂಡ ನ್ಯಾಯಪೀಠ ಬುಧವಾರ ವರ್ಚುವಲ್ ಮೂಲಕ ಕೆಲಸಮಯ ಪ್ರಕರಣದ ವಿಚಾರಣೆ ನಡೆಸಿ ಬಳಿಕ, ಎರಡು ವಾರಗಳ ಬಳಿಕ ಸಮಗ್ರ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ಲೋಧಾ ಸಮಿತಿ ವರದಿ ಶಿಫಾರಸಿನ ಪ್ರಕಾರ, ಗಂಗೂಲಿ ಅವಧಿ ಜುಲೈ 27ಕ್ಕೆ ಅಂತ್ಯಗೊಳ್ಳಲಿದ್ದರೆ, ಜಯ್ ಷಾ ಅವಧಿ ಕಳೆದ ತಿಂಗಳೇ ಮುಕ್ತಾಯಗೊಂಡಿದೆ. ಬಿಸಿಸಿಐ ನಿಯಮ ಪ್ರಕಾರ ಬಿಸಿಸಿಐ ಅಥವಾ ರಾಜ್ಯ ಸಂಸ್ಥೆಗಳಲ್ಲಿ ಸತತ ಎರಡು ಅವಧಿಯ (ತಲಾ 3 ವರ್ಷ) ಆಡಳಿತದ ಬಳಿಕ ಕೂಲಿಂಗ್-ಆಫ್ ಕಡ್ಡಾಯವಾಗಿರುತ್ತದೆ. ಅಂದರೆ ಮತ್ತೆ 3 ವರ್ಷಗಳ ಕಾಲ ಯಾವುದೇ ಅಧಿಕಾರದಲ್ಲಿರುವಂತಿಲ್ಲ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುವುದಕ್ಕೂ ಮುನ್ನ ಬಂಗಾಳ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ, ಅಧ್ಯಕ್ಷರಾಗಿದ್ದರೆ, ಜಯ್ ಷಾ ಗುಜರಾತ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿಯಾಗಿದ್ದರು.