ದಕ್ಷಿಣ ವಲಯಕ್ಕೆ ಎಸ್‌ಆರ್‌ಎಂ ಚಾಂಪಿಯನ್, ಮಂಗಳೂರು ವಿವಿಗೆ ನಾಲ್ಕನೇ ಸ್ಥಾನ: ಅಂತರ ವಿವಿ ಮಟ್ಟದ ವಾಲಿಬಾಲ್ ಟೂರ್ನಿಗೆ ತೆರೆ

srm university chennai volleyball team mandya
Published on

ಮಂಡ್ಯ: ನಗರದ ಪಿಇಟಿ ಕ್ರೀಡಾ ಸಮುಚ್ಛಯದಲ್ಲಿ ನಡೆದ ನಾಲ್ಕು ದಿನದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ತಮಿಳುನಾಡು ಚೆನ್ನೈನ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.
ಪ್ರಥಮ ಸ್ಥಾನಕ್ಕಾಗಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಎಸ್‌ಆರ್‌ಎಂ ತಂಡ ಚೆನ್ನೈನ ಮದ್ರಾಸ್ ಯೂನಿವರ್ಸಿಟಿ ತಂಡವನ್ನು ಸೋಲಿಸುವ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿತು. ಇದರೊಂದಿಗೆ ಅಂತರ ವಿವಿ ಮಟ್ಟದ ಟೂರ್ನಿಯಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿತು. ಸುಮಾರು ಎರಡೂವರೆ ಗಂಟೆ ನಡೆದ ಪಂದ್ಯದಲ್ಲಿ ರೋಚಕ ಕ್ಷಣ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು.
ಎಸ್‌ಆರ್‌ಎಂ ಹಾಗೂ ಮದ್ರಾಸ್ ಯೂನಿವರ್ಸಿಟಿ ಪಂದ್ಯ ಪ್ರಾರಂಭದಿಂದಲೂ ಜಿದ್ದಾಜಿದ್ದಿನಿಂದ ಕೂಡಿತ್ತು. ಮೊದಲ ಸೆಟ್‌ನಲ್ಲಿ ಎಸ್‌ಆರ್‌ಎಂ 24 ಅಂಕ ಪಡೆದರೆ, ಮದ್ರಾಸ್ ವಿವಿ 26 ಅಂಕದೊಂದಿಗೆ ಗೆಲುವು ದಕ್ಕಿಸಿಕೊಂಡಿತ್ತು. ಆದರೆ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಎಸ್‌ಆರ್‌ಎಂ 25 ಮತ್ತು 19 ಅಂತರದಲ್ಲಿ ಮದ್ರಾಸ್ ವಿವಿಯನ್ನು ಸೋಲಿಸಿತು. ಮಾತ್ರವಲ್ಲದೆ ಮೂರನೇ ಸೆಟ್‌ನಲ್ಲಿ 25 ಮತ್ತು 14 ಅಂಕಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಆದರೆ ನಾಲ್ಕನೇ ಸೆಟ್‌ನಲ್ಲಿ ಫೈಟ್ ಬ್ಯಾಕ್ ಮಾಡಿದ ಮದ್ರಾಸ್ ವಿವಿ 25 ಮತ್ತು 17 ಅಂಕಗಳ ಅಂತರದಲ್ಲಿ ಗೆಲುವು ಕಂಡಿತ್ತು.
ಈ ಹಿನ್ನೆಲೆಯಲ್ಲಿ ಪಂದ್ಯ ಕೊನೆಯ ಸೆಟ್‌ಗೆ ಹೋಯಿತು. ಆದ್ದರಿಂದ 15 ಅಂಕಕ್ಕೆ ಗೆಲುವು ನಿಗದಿಪಡಿಸಲಾಗಿತ್ತು. ಇನ್ನು ಪ್ರಾರಂಭದಿಂದಲೂ ಮದ್ರಾಸ್ ಐದು ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಎಸ್‌ಆರ್‌ಎಂ ತಂಡದ ಆಟಗಾರರು ಚಾಣಾಕ್ಷತನ ಆಟಕ್ಕೆ ಮದ್ರಾಸ್ ವಿವಿ ಆಟಗಾರರು ನಿರುತ್ತರಗೊಂಡರು. ಅಂತಿಮವಾಗಿ 15 ಮತ್ತು 12 ಅಂತರದಲ್ಲಿ ಗೆದ್ದು ಪ್ರಶಸ್ತಿಯನ್ನು ಬಾಚಿಕೊಂಡಿತು. ಇನ್ನು ಕಳೆದ ವರ್ಷ ನಾಲ್ಕನೇ ಸ್ಥಾನ ಪಡೆದಿದ್ದ ಮದ್ರಾಸ್ ವಿವಿ ಈ ಬಾರಿ ರನ್ನರ್ ಅಪ್ ಸ್ಥಾನ ಅಲಂಕರಿಸಿತ್ತು.

ಇನ್ನು ಕೇರಳದ ಕ್ಯಾಲಿಕಟ್ ಯೂನಿವರ್ಸಿಟಿ ಮಂಗಳೂರು ವಿವಿಯನ್ನು ಸೋಲಿಸಿ ಮೂರನೇ ಸ್ಥಾನ ಪಡೆದುಕೊಂಡಿತು. ಕಳೆದ ವರ್ಷ ಕೇರಳ ವಿವಿ ರನ್ನರ್ ಅಪ್ ಆಗಿದ್ದರೆ, ಮೂರನೇ ಸ್ಥಾನ ಪಡೆದಿದ್ದ ಮಂಗಳೂರು ವಿವಿ ಈ ಬಾರಿ ನಾಲ್ಕನೇ ಬಹುಮಾನ ಪಡೆದುಕೊಂಡಿತು. ಇದರೊಂದಿಗೆ ನಾಲ್ಕು ದಿನದ ನಡೆಯುತ್ತಿದ್ದ ಟೂರ್ನಿಗೆ ವೈಭವಯುತ ತೆರೆ ಬಿದ್ದಿತ್ತು. ವಿಜೇತರಿಗೆ ಪಿಇಎಸ್ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಕಾರ್ಯದರ್ಶಿ ಶಿವಪ್ರಸಾದ್, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಚಂದ್ರಕುಮಾರ್, ಅಂತಾರಾಷ್ಟ್ರೀ ಬ್ಯಾಸ್ಕೆಟ್‌ಬಾಲ್ ಆಟಗಾರ ಬಿ.ಕೆ.ಅನಿಲ್‌ಕುಮಾರ್ ಬಹುಮಾನ ವಿತರಿಸಿದರು.
ಎಸ್‌ಆರ್‌ಎಂ, ಮದ್ರಾಸ್ ವಿವಿ, ಕೇರಳದ ಕ್ಯಾಲಿಕಟ್ ವಿವಿ ಹಾಗೂ ಮಂಗಳೂರು ವಿವಿ ತಂಡಗಳು ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಅಂತರ ವಿಶ್ವವಿದ್ಯಾನಿಲಯ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net