ಮುಲ್ಡರ್​ ಸೂಪರ್​ 367*, ದಾಖಲೆಗಳ ಧಮಾಕಾ!: ಲಾರಾ, ಸೆಹ್ವಾಗ್ ದಾಖಲೆ ಸುರಕ್ಷಿತ

New Project (2)
Published on

ಬುಲವಾಯೊ: ಟೆಸ್ಟ್​ ಕ್ರಿಕೆಟ್​ನಲ್ಲಿ ಈಗ ದಾಖಲೆಗಳ ಧಮಾಕಾದ ಸಮಯ. ಶುಭಮಾನ್​ ಗಿಲ್​ ಸಾರಥ್ಯದ ಭಾರತ ತಂಡ ಎಜ್​ಬಾಸ್ಟನ್​ನಲ್ಲಿ ರನ್​ಮಳೆ ಹರಿಸಿ ಹಲವಾರು ದಾಖಲೆಗಳನ್ನು ಬರೆದ ಬೆನ್ನಲ್ಲೇ ಜಿಂಬಾಬ್ವೆಯ ಬುಲವಾಯೊದಲ್ಲೂ ದಾಖಲೆಗಳ ಸುರಿಮಳೆಯಾಗಿದೆ. ದಕ್ಷಿಣ ಆಫ್ರಿಕಾದ ಆಲ್ರೌಂಡರ್​ ಮತ್ತು ಹಂಗಾಮಿ ನಾಯಕ ವಿಯಾನ್​ ಮುಲ್ಡರ್​ (367*ರನ್​, 334 ಎಸೆತ, 49 ಬೌಂಡರಿ, 4 ಸಿಕ್ಸರ್​) ಆತಿಥೇಯ ಜಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಅಮೋ ತ್ರಿಶತಕ ಸಿಡಿಸುವ ಮೂಲಕ ಹಲವಾರು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ವೆಸ್ಟ್​ ಇಂಡೀಸ್​ ದಿಗ್ಗಜ ಬ್ರಿಯಾನ್​ ಲಾರಾ ಅವರ 400 ರನ್​ಗಳ ವಿಶ್ವದಾಖಲೆಯನ್ನೂ ಮುರಿಯುವ ಅಪೂರ್ವ ಅವಕಾಶವೂ ಮುಲ್ಡರ್​ ಮುಂದಿದ್ದರೂ, ಇನಿಂಗ್ಸ್​ ಡಿಕ್ಲೇರ್​ ಘೋಷಿಸಿ ಗೆಲುವಿಗೆ ಆದ್ಯತೆ ನೀಡುವ ಕೇವಲ 34 ರನ್​ಗಳಿಂದ ಅದನ್ನು ತಪ್ಪಿಸಿಕೊಂಡರು.

ಪಂದ್ಯದ ಮೊದಲ ದಿನವೇ 264 ರನ್​ ಸಿಡಿಸಿ ಆರ್ಭಟಿಸಿದ್ದ 27 ವರ್ಷದ ಮುಲ್ಡರ್​, 2ನೇ ದಿನ ಭೋಜನ ವಿರಾಮದವರೆಗೆ ಬ್ಯಾಟಿಂಗ್​ ಮಾಡಿ ಮತ್ತೆ 103 ರನ್​ ಕಲೆಹಾಕಿದರು. ಆದರೆ ಭೋಜನ ವಿರಾಮದ ಬಳಿಕ ಮರಳಿ ಬ್ಯಾಟಿಂಗ್​ಗೆ ಇಳಿಯದೆ, 114 ಓವರ್​ಗಳಲ್ಲಿ 5 ವಿಕೆಟ್​ಗೆ 626 ರನ್​ ಗಳಿಸಿದ್ದ ದಕ್ಷಿಣ ಆಫ್ರಿಕಾದ ಇನಿಂಗ್ಸ್​ ಡಿಕ್ಲೇರ್​ ಮಾಡಿದರು. ಇದರಿಂದ ಲಾರಾ ದಾಖಲೆ ಮುರಿಯುವ ನಿರೀೆ ಹುಸಿಯಾಯಿತು.

ಮುಲ್ಡರ್​ ದಕ್ಷಿಣ ಆಫ್ರಿಕಾದ 2ನೇ ತ್ರಿಶತಕ ಸಾಧಕ ಮತ್ತು ಸರ್ವಾಧಿಕ ರನ್​ ಸ್ಕೋರರ್​ ಎನಿಸಿದರು. ಹಾಶಿಂ ಆಮ್ಲ ದಕ್ಷಿಣ ಆಫ್ರಿಕಾದ ಮೊದಲ ತ್ರಿಶತಕವೀರ ಮತ್ತು 2012ರ ಓವಲ್​ ಟೆಸ್ಟ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಅವರು ಗಳಿಸಿದ್ದ ಅಜೇಯ 311 ರನ್​ ಹರಿಣಗಳ ಪರ ಇದುವರೆಗಿನ ಗರಿಷ್ಠ ಸ್ಕೋರ್​ ಆಗಿತ್ತು.

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಗೆಲುವಿನ ಬಳಿಕ ದಕ್ಷಿಣ ಆಫ್ರಿಕಾ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಜಿಂಬಾಬ್ವೆ ವಿರುದ್ಧ ಸರಣಿ ಆಡುತ್ತಿದ್ದು, ಮೊದಲ ಟೆಸ್ಟ್​ನಲ್ಲಿ ಹಂಗಾಮಿ ನಾಯಕರಾಗಿದ್ದ ಕೇಶವ್​ ಮಹಾರಾಜ್​ ಗಾಯಗೊಂಡ ಕಾರಣ 2ನೇ ಟೆಸ್ಟ್​ನಲ್ಲಿ ನಾಯಕತ್ವ ಮುಲ್ಡರ್​ ಹೆಗಲೇರಿತ್ತು. ಅವರೀಗ ನಾಯಕತ್ವದ ಮೊದಲ ಟೆಸ್ಟ್​ನಲ್ಲೇ ತ್ರಿಶತಕ ಸಿಡಿಸಿದ ಮೊದಲ ನಾಯಕ ಎನಿಸಿದ್ದಾರೆ. ನ್ಯೂಜಿಲೆಂಡ್​ನ ಗ್ರಹಾಂ ಡೌಲಿಂಗ್​ 239 ರನ್​ ಗಳಿಸಿದ್ದು ಹಿಂದಿನ ಗರಿಷ್ಠ.

ಲಾರಾ ದಾಖಲೆ ಸುರಕ್ಷಿತ

ಬ್ರಿಯಾನ್​ ಲಾರಾ 2004ರ ಸೇಂಟ್​ ಜಾನ್ಸ್​ ಟೆಸ್ಟ್​ನಲ್ಲಿ ಇಂಗ್ಲೆಂಡ್​ ಎದುರು ಅಜೇಯ 400 ರನ್​ ಗಳಿಸಿದ್ದು ಟೆಸ್ಟ್​ ಕ್ರಿಕೆಟ್​ನಲ್ಲಿ ಸರ್ವಾಧಿಕ ವೈಯಕ್ತಿಕ ರನ್​ ಎನಿಸಿದೆ. 21 ವರ್ಷಗಳ ಬಳಿಕ ಈ ದಾಖಲೆ ಮುರಿಯುವ ಅವಕಾಶ ಮುಲ್ಡರ್​ ಮುಂದಿತ್ತು. ತ್ರಿಶತಕ ಸಿಡಿಸಿದ ಬಳಿಕ ಮತ್ತಷ್ಟು ಬಿರುಸಾಗಿ ಆಡಿದ ಮುಲ್ಡರ್​ 37 ಎಸೆತಗಳಲ್ಲೇ ಮುಂದಿನ 67 ರನ್​ ಸಿಡಿಸಿದರು. ಇದರಿಂದ ಅವರು ಲಾರಾ ದಾಖಲೆ ಮುರಿಯಲು ಯತ್ನಿಸುವ ನಿರೀಕ್ಷೆ ಮೂಡಿದರೂ, ವಿರಾಮದ ನಂತರ ಡಿಕ್ಲೇರ್​ ಮಾಡುವ ನಿಸ್ವಾರ್ಥ ನಿರ್ಧಾರ ತೆಗೆದುಕೊಂಡಿದ್ದು ಅಚ್ಚರಿ ಸೃಷ್ಟಿಸಿತು. ವಿರಾಮಕ್ಕೆ ಮೊದಲೇ ದಿಗ್ಗಜರಾದ ಲೆನ್​ ಹಟನ್​ (364), ಗ್ಯಾರಿ ಸೋಬರ್ಸ್​ (365*) ದಾಖಲೆ ಮುರಿದಿದ್ದ ಮುಲ್ಡರ್​ ಮುಂದೆ, ಜಯವರ್ಧನೆ (374), ಲಾರಾ (375), ಹೇಡನ್​ (380) ದಾಖಲೆಗಳನ್ನು ಮುರಿಯುವ ಅವಕಾಶವೂ ಇತ್ತು.

300 ಎಸೆತದೊಳಗೆ ತ್ರಿಶತಕ

ಮುಲ್ಡರ್​ ಟೆಸ್ಟ್​ ಕ್ರಿಕೆಟ್​ನಲ್ಲಿ 300 ಎಸೆತದೊಳಗೆ ತ್ರಿಶತಕ ಸಿಡಿಸಿದ ಕೇವಲ 2ನೇ ಬ್ಯಾಟರ್​ ಎನಿಸಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನ 2ನೇ ಅತಿವೇಗದ ತ್ರಿಶತಕ ಸಾಧನೆ ಮಾಡಿದರು. ಮುಲ್ಡ್​ 297 ಎಸೆತಗಳಲ್ಲಿ ತ್ರಿಶತಕ ಪೂರೈಸಿದರೆ, 2008ರ ಚೆನ್ನೆ ಟೆಸ್ಟ್​ನಲ್ಲಿ  ಆಫ್ರಿಕಾ ಎದುರು ಭಾರತದ ವೀರೇಂದ್ರ ಸೆಹ್ವಾಗ್​ 278 ಎಸೆತಗಳಲ್ಲೇ ತ್ರಿಶತಕ ಸಿಡಿಸಿದ್ದು ಅತಿವೇಗದ ಸಾಧನೆಯಾಗಿದೆ. ಮುಲ್ಡರ್​ 109.88 ಸ್ಟ್ರೆಕ್​ರೇಟ್​ನಲ್ಲಿ ರನ್​ ಗಳಿಸಿದರು. ಇದು ತ್ರಿಶತಕ ಸಾಧಕರ ಪೈಕಿ ಗರಿಷ್ಠ ಸ್ಟ್ರೆಕ್​ರೇಟ್​ ಆಗಿದೆ.

 29: ಮುಲ್ಡರ್​ ಟೆಸ್ಟ್​ ಕ್ರಿಕೆಟ್​ನಲ್ಲಿ 29ನೇ ತ್ರಿಶತಕವೀರ ಮತ್ತು ನಾಯಕನಾಗಿ ತ್ರಿಶತಕ ಸಿಡಿಸಿದ 9ನೇ ಆಟಗಾರ ಎನಿಸಿದರು.

49: ಮುಲ್ಡರ್​ ಟೆಸ್ಟ್​ ಇನಿಂಗ್ಸ್​ ಒಂದರಲ್ಲಿ ಸರ್ವಾಧಿಕ ಬೌಂಡರಿ ಬಾರಿಸಿದ ಬ್ಯಾಟರ್​ ಎನಿಸಿದರು. ಗ್ರಹಾಂ ಗೂಚ್​, ಬ್ರಿಯಾನ್​ ಲಾರಾ, ಜಯವರ್ಧನೆ ತಲಾ 43 ಬೌಂಡರಿ ಸಿಡಿಸಿದ್ದು ಹಿಂದಿನ ಗರಿಷ್ಠ.

220: ಮುಲ್ಡರ್​ ಟೆಸ್ಟ್​ ಇನಿಂಗ್ಸ್​ ಒಂದರಲ್ಲಿ ಬೌಂಡರಿ (49), ಸಿಕ್ಸರ್​ (4) ಮೂಲಕವೇ 2ನೇ ಗರಿಷ್ಠ 220 ರನ್​ ಗಳಿಸಿದ ಬ್ಯಾಟರ್​ ಎನಿಸಿದರು. ಜಾನ್​ ಎಂಡ್ರಿಚ್​ 238 ರನ್​ (52 ಬೌಂಡರಿ, 5 ಸಿಕ್ಸರ್​) ಗಳಿಸಿದ್ದು ಗರಿಷ್ಠ.

367: ಬ್ಯಾಟರ್​ ಓರ್ವ ವಿದೇಶಿ ನೆಲದಲ್ಲಿ ಗಳಿಸಿದ ಗರಿಷ್ಠ ರನ್​ ಇದಾಗಿದೆ. 1958ರಲ್ಲಿ ಪಾಕಿಸ್ತಾನದ ಹನ್​ೀ ಮೊಹಮದ್​ ವಿಂಡೀಸ್​ನ ಬ್ರಿಜ್​ಟೌನ್​ನಲ್ಲಿ 337 ರನ್​ ಗಳಿಸಿದ್ದು ಹಿಂದಿನ ಗರಿಷ್ಠ.

264: ಮುಲ್ಡರ್​ ಮೊದಲ ದಿನ ಗಳಿಸಿದ್ದ 264 ರನ್​, ಬ್ಯಾಟರ್​ ಒಬ್ಬ ದಿನವೊಂದರಲ್ಲಿ ಗಳಿಸಿದ 6ನೇ ಗರಿಷ್ಠ ಗಳಿಕೆಯಾಗಿದೆ. ಡಾನ್​ ಬ್ರಾಡ್ಮನ್​ 1930ರಲ್ಲಿ 309 ರನ್​ ಸಿಡಿಸಿದ್ದು ಗರಿಷ್ಠವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net