ಮೊದಲ ಟಿ20 ಪಂದ್ಯದಲ್ಲಿ ಭಾರತದ ಮಹಿಳೆಯರಿಗೆ ಶಾಕ್​ ನೀಡಿದ ದಕ್ಷಿಣ ಆಫ್ರಿಕಾ

web ind vs sa
Published on

ಚೆನ್ನೈ: ಮಹಿಳೆಯರ ಕ್ರಿಕೆಟ್​ನಲ್ಲಿ ಆತಿಥೇಯ ಭಾರತ ತಂಡದ ಸತತ ಗೆಲುವಿನ ಓಟಕ್ಕೆ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಕಡಿವಾಣ ಹಾಕಿದೆ. ಉಪನಾಯಕಿ ಸ್ಮೃತಿ ಮಂದನಾ (46 ರನ್​, 30 ಎಸೆತ, 7 ಬೌಂಡರಿ, 2 ಸಿಕ್ಸರ್​) ಮತ್ತು ಹರ್ಮಾನ್​ಪ್ರೀತ್​ ಕೌರ್​-ಜೆಮೀಮಾ ರೋಡ್ರಿಗಸ್​ ಪ್ರತಿಹೋರಾಟದ ನಡುವೆಯೂ ಭಾರತ ತಂಡ ಮಹಿಳೆಯರ ಮೊದಲ ಟಿ20 ಪಂದ್ಯದಲ್ಲಿ ದ. ಆಫ್ರಿಕಾಕ್ಕೆ 12 ರನ್​ಗಳಿಂದ ಶರಣಾಗಿದೆ. ಇದರಿಂದ 3 ಪಂದ್ಯಗಳ ಸರಣಿಯಲ್ಲಿ ಹರ್ಮಾನ್​ಪ್ರೀತ್​ ಕೌರ್​ ಬಳಗ 0-1 ಹಿನ್ನಡೆ ಅನುಭವಿಸಿದೆ.

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ದ. ಆಫ್ರಿಕಾ, ತಜ್ಮಿನ್​ ಬ್ರಿಟ್ಸ್​ (81 ರನ್​, 56 ಎಸೆತ, 10 ಬೌಂಡರಿ, 3 ಸಿಕ್ಸರ್​) ಮತ್ತು ಮಾರಿಜಾನ್​ ಕಾಪ್​ (57 ರನ್​, 33 ಎಸೆತ, 8 ಬೌಂಡರಿ, 1 ಸಿಕ್ಸರ್​) ಬಿರುಸಿನ ಅರ್ಧಶತಕದ ಬಲದಿಂದ 4 ವಿಕೆಟ್​ಗೆ 189 ರನ್​ ಪೇರಿಸಿತು. ಪ್ರತಿಯಾಗಿ ಭಾರತ ತಂಡ 4 ವಿಕೆಟ್​ಗೆ 177 ರನ್​ ಗಳಿಸಲಷ್ಟೇ ಶಕ್ತವಾಯಿತು.

ನಾಯಕಿ ಹರ್ಮಾನ್​ಪ್ರೀತ್​ ಕೌರ್​ (35 ರನ್​, 29 ಎಸೆತ, 5 ಬೌಂಡರಿ) ಮತ್ತು ಜೆಮೀಮಾ ರೋಡ್ರಿಗಸ್​ (53*ರನ್​, 30 ಎಸೆತ, 7 ಬೌಂಡರಿ, 1 ಸಿಕ್ಸರ್​) 4ನೇ ವಿಕೆಟ್​ಗೆ 59 ಎಸೆತಗಳಲ್ಲಿ 90 ರನ್​ ಸೇರಿಸಿ ಪ್ರತಿಹೋರಾಟ ನಡೆಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಭಾರತ ಈ ಮುನ್ನ ಏಕದಿನ ಸರಣಿಯಲ್ಲಿ ಕ್ಲೀನ್​ಸ್ವೀಪ್​ ಸಾಧಿಸಿ, ಏಕೈಕ ಟೆಸ್ಟ್​ ಪಂದ್ಯದಲ್ಲೂ ಜಯಿಸಿತ್ತು.

ನಾಯಕಿ ಲೌರಾ ವೊಲ್ವಾರ್ಡ್​ (33) ಮತ್ತು ತಜ್ಮಿನ್​ ಬ್ರಿಟ್ಸ್​ ಮೊದಲ ವಿಕೆಟ್​ಗೆ 50 ರನ್​ ಸೇರಿಸುವ ಮೂಲಕ ದಣ ಆಫ್ರಿಕಾಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಬಳಿಕ ಕಾಪ್​ ಜತೆಗೂಡಿ 56 ಎಸೆತಗಳಲ್ಲಿ 96 ರನ್​ ಕಸಿಯುವ ಮೂಲಕ ಬ್ರಿಟ್ಸ್​ ಬೃಹತ್​ ಮೊತ್ತದತ್ತ ತಂಡವನ್ನು ಮುನ್ನಡೆಸಿದರು. ಕೊನೇ 6 ಓವರ್​ಗಳಲ್ಲಿ ದಣ ಆಫ್ರಿಕಾ 71 ರನ್​ ಕಸಿಯಿತು.

ದಕ್ಷಿಣ ಆಫ್ರಿಕಾ: 4 ವಿಕೆಟ್​ಗೆ 189 (ವೊಲ್ವಾರ್ಡ್​ 33, ಬ್ರಿಟ್ಸ್​ 81, ಕಾಪ್​ 57, ಪೂಜಾ 23ಕ್ಕೆ 2, ರಾಧಾ 40ಕ್ಕೆ 2). ಭಾರತ: 4 ವಿಕೆಟ್​ಗೆ 177 (ಶೆಫಾಲಿ 18, ಸ್ಮೃತಿ 46, ಹೇಮಲತಾ 14, ಹರ್ಮಾನ್​ಪ್ರೀತ್​ 35, ಜೆಮೀಮಾ 53*, ಖಾಕಾ 39ಕ್ಕೆ 1, ಟೆಆನ್​ 32ಕ್ಕೆ 1, ಡಿಕ್ಲರ್ಕ್​ 30ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net