

ಶಾರ್ಜಾ: ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ದಕ್ಷಿಣ ಆಫ್ರಿಕಾ ತಂಡ, ಸರ್ವಾಂಗೀಣ ನಿರ್ವಹಣೆ ನೆರವಿನಿಂದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಜಯ ದಾಖಲಿಸುವ ಮೂಲಕ ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದ.ಆಫ್ರಿಕಾ ತಂಡ 4 ವಿಕೆಟ್‌ಗಳಿಂದ 2014ರ ಚಾಂಪಿಯನ್ ಶ್ರೀಲಂಕಾ ತಂಡವನ್ನು ಸೋಲಿಸಿತು. ಸತತ ಎರಡನೇ ಸೋಲನುಭವಿಸಿದ ಶ್ರೀಲಂಕಾ ತಂಡದ ಮುಂದಿನ ಹಾದಿ ಬಹುತೇಕ ಬಂದ್ ಆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ, ಪಥುಮ್ ನಿಸ್ಸಾಂಕ (72ರನ್, 58 ಎಸೆತ, 6 ಬೌಂಡರಿ, 3 ಸಿಕ್ಸರ್) ಬಿರುಸಿನ ಆರಂಭದ ನಡುವೆಯೂ ತಬರೇಜ್ ಶಮ್ಸಿ (17ಕ್ಕೆ 3) ಹಾಗೂ ಡ್ವೇನೆ ಪ್ರಿಟೋರಿಯಸ್ (17ಕ್ಕೆ 3) ಜೋಡಿಯ ದಾಳಿಗೆ ನಲುಗಿ 142 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ದಕ್ಷಿಣ ಆಫ್ರಿಕಾ ತಂಡಕ್ಕೆ ದುಶ್ಮಾಂತ ಚಮೀರಾ (27ಕ್ಕೆ 2) ಹಾಗೂ ವನಿಂದು ಹಸರಂಗ (20ಕ್ಕೆ 3) ಕಡಿವಾಣ ಹಾಕಲು ಯತ್ನಿಸಿದರು. ನಾಯಕ ತೆಂಬಾ ಬವುಮಾ (46ರನ್, 46 ಎಸೆತ, 1 ಬೌಂಡರಿ, 1 ಸಿಕ್ಸರ್) ಸಯೋಚಿತ ನಿರ್ವಹಣೆ ತೋರಿದರೆ, ಕಡೇ ಹಂತದಲ್ಲಿ ಮಿಲ್ಲರ್-ರಬಾಡ ಜೋಡಿಯ ಅಬ್ಬರದಿಂದಾಗಿ 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 146 ರನ್ ಗಳಿಸಿ ಜಯದ ನಗೆ ಬೀರಿತು.
ಶ್ರೀಲಂಕಾ: 20 ಓವರ್‌ಗಳಲ್ಲಿ 142 (ಪಥುಮ್ ನಿಸ್ಸಾಂಕ 72, ಚರಿತಾ ಅಸಲಂಕಾ 21, ತಬರೇಜ್ ಶಮ್ಸಿ 17ಕ್ಕೆ 3, ಡ್ವೇನೆ ಪ್ರಿಟೋರಿಯಸ್ 17ಕ್ಕೆ 3, ಅನ್ರಿಚ್ ನೋಕಿಯ 27ಕ್ಕೆ 2), ದಕ್ಷಿಣ ಆಫ್ರಿಕಾ: 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 146 (ಡೇವಿಡ್ ಮಿಲ್ಲರ್ 23*, ತೆಂಬಾ ಬವುಮಾ 46, ವನಿಂದು ಹಸರಂಗ 20ಕ್ಕೆ 3, ದುಶ್ಮಾಂತ ಚಮೀರಾ 27ಕ್ಕೆ 2).