ರೋಹಿತ್​, ಕೊಹ್ಲಿ... ಆಸಿಸ್​ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಸೌರವ್ ಗಂಗೂಲಿ! Sourav Ganguly

Sourav Ganguly
Published on

Sourav Ganguly : ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಭಾರತ ತಂಡ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 9 ವರ್ಷಗಳ ಬಳಿಕ ಮತ್ತೆ ಕಳೆದುಕೊಂಡಿತು.

ಸರಣಿಯುದ್ದಕ್ಕೂ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದೇ ಇದಕ್ಕೆ ಕಾರಣ. ರೋಹಿತ್ ಶರ್ಮ ಅವರ ಕಳಪೆ ಫಾರ್ಮ್, ವಿರಾಟ್​​ ಕೊಹ್ಲಿ ಒಂದೇ ರೀತಿಯಲ್ಲಿ ಔಟಾಗಿದ್ದು ಮತ್ತು ರಿಷಭ್​ ಪಂತ್ ಸುಲಭವಾಗಿ ವಿಕೆಟ್​ ಒಪ್ಪಿಸಿದ್ದು ಎಲ್ಲವೂ ಸುದ್ದಿಯಾಯಿತು ಮತ್ತು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.

ಟೀಮ್​ ಇಂಡಿಯಾದ ಕಳಪೆ ಆಟದ ಬಗ್ಗೆ ಮಾಜಿ ಅಗ್ರ ಆಟಗಾರರು ಮತ್ತು ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಭಾರತದ ಸೋಲಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ತಂಡವು 170-180 ರನ್‌ಗಳಿಂದ ಟೆಸ್ಟ್ ಗೆಲ್ಲಲು ಸಾಧ್ಯವಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ನೀವು ಚೆನ್ನಾಗಿ ಬ್ಯಾಟಿಂಗ್ ಮಾಡಬೇಕು. ಇಲ್ಲದಿದ್ದರೆ ನೀವು ಪಂದ್ಯವನ್ನು ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ನೀವು 170-180 ರನ್ ಗಳಿಸಿ ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ, ನೀವು 350 ರಿಂದ 400 ರನ್ ಗಳಿಸಲೇಬೇಕು ಎಂದು ಕೋಲ್ಕತದಲ್ಲಿ ಗಂಗೂಲಿ ಹೇಳಿದರು.

ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯವಾಗಿದೆ ಎಂದಿರುವ ಗಂಗೂಲಿ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಬಗ್ಗೆಯೂ ಮಾತನಾಡಿದರು. ಇಲ್ಲಿ ಯಾರನ್ನೂ ದೂಷಿಸಲಾಗುವುದಿಲ್ಲ. ಎಲ್ಲರೂ ರನ್ ಗಳಿಸಬೇಕು. ಕೊಹ್ಲಿಯ ಪ್ರದರ್ಶನದಲ್ಲಿ ಏನು ತಪ್ಪಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಆದರೆ, ಅವರು ಶ್ರೇಷ್ಠ ಆಟಗಾರ ಮತ್ತು ಅವರು ಈ ಸಮಸ್ಯೆಯಿಂದ ಆದಷ್ಟು ಬೇಗ ಹೊರಬರುತ್ತಾರೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದರು.

ಸಿಡ್ನಿ ಟೆಸ್ಟ್‌ನಿಂದ ದೂರ ಉಳಿಯುವ ರೋಹಿತ್ ನಿರ್ಧಾರ ಅವರ ವೈಯಕ್ತಿಕ ನಿರ್ಧಾರ ಎಂದು ಗಂಗೂಲಿ ಹೇಳಿದರು. ಸರಣಿಯುದ್ದಕ್ಕೂ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದಾರೆ. ಹೀಗಾಗಿ ಅವಕಾಶ ಸಿಕ್ಕರೆ ಉತ್ತಮ ಪ್ರದರ್ಶನದೊಂದಿಗೆ ಬ್ಯಾಟ್ಸ್‌ಮನ್‌ಗಳು ಮರಳಬೇಕು ಎಂದು ಗಂಗೂಲಿ ಸಲಹೆ ನೀಡಿದರು. (ಏಜೆನ್ಸೀಸ್​)‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net