

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಮುಕ್ತಾಯಗೊಂಡು ಆರು ತಿಂಗಳು ಪೂರೈಸುವ ಮುನ್ನವೇ ಪದಕಗಳು ತನ್ನ ಬಣ್ಣ ಕಳೆದುಕೊಳ್ಳುತ್ತಿದ್ದು, ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಸೇರಿ ಪ್ರಪಂಚದಾದ್ಯಂತ ಹಲವು ಕ್ರೀಡಾಪಟುಗಳು ವಿಜೇತ ಪದಕಗಳ ಬಣ್ಣ ಕಳೆದುಕೊಂಡಿವೆ ಎನ್ನಲಾಗಿದೆ. ಕೆಲ ಕ್ರೀಡಾಪಟುಗಳು ಪದಕಗಳ ಗುಣಮಟ್ಟ ಮತ್ತು ಇತ್ತೀಚಿನ ಪರಿಸ್ಥಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬೇಸರ ಹೊರಹಾಕಿದ್ದಾರೆ.
ಪ್ಯಾರಿಸ್‌ನಲ್ಲಿ ಅವಳಿ ಕಂಚು ವಿಜೇತೆ ಮನು ಭಾಕರ್, ಶೂಟರ್ ಸ್ವಪ್ನಿಲ್ ಕುಸಾಲೆ ಹಾಗೂ ಹಾಕಿ ಆಟಗಾರ ಹಾರ್ದಿಕ್ ಸಿಂಗ್ ಅವರ ಪದಕಗಳು ಹಾನಿಗೊಳಗಾಗಿದ್ದು, ದಿನ ಕಳೆದಂತೆ ಪದಕಗಳು ಬಣ್ಣ ಕಳೆದುಕೊಳ್ಳುತ್ತಿವೆ ಎನ್ನಲಾಗಿದೆ. ಹಾನಿಗೊಳಗಾದ ಪದಕಗಳನ್ನು ಮೊನೈ ಡಿ ಪ್ಯಾರಿಸ್‌ನಿಂದ (ಫ್ರೆಂಚ್ ಸ್ಟೇಟ್ ಮಿಂಟ್) ಬದಲಾಯಿಸಲಾಗುವುದು ಮತ್ತು ಮೂಲ ಪದಕಗಳ ರೀತಿಯಲ್ಲಿ ವಿನ್ಯಾಸದೊಂದಿಗೆ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಸಿ) ಹೇಳಿದೆ.
ಪ್ಯಾರಿಸ್ ಒಲಿಂಪಿಕ್ಸೃ್ ಸಂಘಟನಾ ಸಮಿತಿಯು ಮೊನೈ ಡಿ ಪ್ಯಾರಿಸ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಮುಂಬರುವ ದಿನಗಳನ್ನು ಹಾನಿಗೊಳಗಾಗಿರುವ ಪದಕಗಳನ್ನು ಬದಲಾಯಿಸುವ ಸಾಧ್ಯತೆಯಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 5,084 ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಣಕ್ಕಿಡಲಾಗಿತ್ತು. ಈ ಪದಕಗಳನ್ನು ್ರಾನ್ಸ್‌ನ ಐಷಾರಾಮಿ ಆಭರಣಗಳ ತಯಾರಕ ಚೌಮೆಟ್ ವಿನ್ಯಾಸಗೊಳಿಸಿದರೆ, ಮೊನೈ ಡಿ ಪ್ಯಾರಿಸ್ ಪದಕಗಳನ್ನು ತಯಾರುಗೊಳಿಸಿತ್ತು.
ಮೊನೈ ಡಿ ಪ್ಯಾರಿಸ್ ಹಾನಿಗೊಳಗಾದ ಪದಕಗಳ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಕ್ರೀಡಾಪಟುಗಳ ಕೋರಿಕೆಯ ಮೇರೆಗೆ ಮೊನೈ ಡಿ ಪ್ಯಾರಿಸ್ ಎಲ್ಲ ಹಾನಿಗೊಳಗಾದ ಪದಕಗಳನ್ನು 2025ರ ಮೊದಲ ತ್ರೈಮಾಸಿಕದಲ್ಲಿ ಬದಲಾವಯಿಸಲಾಗುವುದು ಎಂದು ತಿಳಿಸಿದೆ. ಮೊನೈ ಡಿ ಪ್ಯಾರಿಸ್ ಅಥವಾ ಫ್ರೆಂಚ್ ಸ್ಟೇಟ್ ಮಿಂಟ್ ಎಂಬುದು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ಫ್ರಾನ್ಸ್ ದೇಶದ ನಾಣ್ಯಗಳು ಮತ್ತು ಇತರ ಕರೆನ್ಸಿಗಳನ್ನು ಮುದ್ರಿಸುವ ಜವಾಬ್ದಾರಿಯನ್ನು ಹೊಂದಿದೆ. ಸ್ವಾತಂತ್ರ್ಯನಂತರದ ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ತಾರೆ ಎನಿಸಿರುವ ಮನು ಭಾಕರ್, ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕಗಳನ್ನು ಜಯಿಸಿದ್ದರು.