ಸೋಫಿಯಾ ಕೆನಿನ್ ಆಸ್ಟ್ರೇಲಿಯಾ ಓಪನ್ ಚಾಂಪಿಯನ್

sofiya
Published on

ಮೆಲ್ಬೋರ್ನ್: ಅಮೆರಿಕದ ಯುವ ಆಟಗಾರ್ತಿ ಸೋಫಿಯಾ ಕೆನಿನ್ 2020ರ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೇಲಿಯಾ ಓಪನ್​ನಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದ ಚಾಂಪಿಯನ್ ಪಟ್ಟವೇರಿದ್ದಾರೆ. ಚೊಚ್ಚಲ ಗ್ರಾಂಡ್ ಸ್ಲಾಂ ಗೆಲುವಿನೊಂದಿಗೆ ಸೋಫಿಯಾ, ಕಳೆದ 12 ವರ್ಷಗಳಲ್ಲಿ ಇಲ್ಲಿ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿದ್ದಾರೆ.

ಮೆಲ್ಬೋರ್ನ್ ಪಾರ್ಕ್​ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ 21 ವರ್ಷದ ಸೋಫಿಯಾ ಕೆನಿನ್, ಸ್ಪೇನ್​ನ ಅನುಭವಿ ಆಟಗಾರ್ತಿ ಗಾರ್ಬಿನ್ ಮುಗುರುಜಾ ವಿರುದ್ಧ 4-6, 6-2, 6-2 ಸೆಟ್​ಗಳಿಂದ ಜಯಿಸಿದರು. 2 ಗಂಟೆ 3 ನಿಮಿಷಗಳ ಹೋರಾಟದಲ್ಲಿ ಮೊದಲ ಸೆಟ್ ಸೋತು ಹಿನ್ನಡೆ ಎದುರಿಸಿದ 14ನೇ ಶ್ರೇಯಾಂಕಿತೆ ಸೋಫಿಯಾ, ಬಳಿಕ ಆಕ್ರಮಣಕಾರಿ ಆಟದೊಂದಿಗೆ ಪಂದ್ಯಕ್ಕೆ ಮರಳಿದರು. 2 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿ ಮುಗುರುಜಾ, ಸೋಫಿಯಾ ಆಟದೆದುರು ಮಂಕಾದರು. ಗೆಲುವಿನ ಬಳಿಕ ಸೋಫಿಯಾ ಭಾವುಕರಾಗಿ ಕಣ್ಣೀರಿಟ್ಟರು ಮತ್ತು ಗೆಲುವಿನ ಕ್ಷಣವನ್ನು ಮೊಬೈಲ್​ನಲ್ಲಿ ಸೆರೆಹಿಡಿಯುತ್ತಿದ್ದ ತಮ್ಮ ಮೊದಲ ಕೋಚ್ ಆಗಿರುವ ತಂದೆ ಅಲೆಕ್ಸಾಂಡರ್ ಕೆನಿನ್​ರತ್ತ ಓಡಿ ಹೋಗಿ ಸಂಭ್ರಮಿಸಿದರು.

ಈ ಜಯದೊಂದಿಗೆ ಸೋಫಿಯಾ ವಿಶ್ವ ರ್ಯಾಂಕಿಂಗ್​ನಲ್ಲಿ 7ನೇ ಸ್ಥಾನಕ್ಕೇರಲಿದ್ದು, ಸೆರೇನಾ ವಿಲಿಯಮ್ಸ್​ರನ್ನು ಹಿಂದಿಕ್ಕಿ ಅಮೆರಿಕದ ಹಾಲಿ ನಂ. 1 ಆಟಗಾರ್ತಿ ಎನಿಸಲಿದ್ದಾರೆ. ಸೆಮಿಫೈನಲ್​ನಲ್ಲಿ ಅವರು ವಿಶ್ವ ನಂ. 1 ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿಗೆ ಆಘಾತ ನೀಡಿದ್ದರು.

2014ರ ಬಳಿಕ ಗ್ರಾಂಡ್ ಸ್ಲಾಂನಲ್ಲಿ ಮೊದಲ ಬಾರಿ ಶ್ರೇಯಾಂಕರಹಿತೆಯಾಗಿ ಕಣಕ್ಕಿಳಿದಿದ್ದ 26 ವರ್ಷದ ಮುಗುರುಜಾ, ಮೆಲ್ಬೋರ್ನ್​ನಲ್ಲಿ ಆಡಿದ ಮೊದಲ ಫೈನಲ್​ನಲ್ಲೇ ನಿರಾಸೆ ಅನುಭವಿಸಿದರು. 2019ರ ಕೊನೇ 6 ತಿಂಗಳಲ್ಲಿ ಕೇವಲ ಒಂದು ಪಂದ್ಯ ಜಯಿಸಿದ್ದ ಮಾಜಿ ವಿಶ್ವ ನಂ. 1 ಮುಗುರುಜಾ, ಆಸ್ಟ್ರೇಲಿಯನ್ ಓಪನ್​ನಲ್ಲಿ ಫಾಮರ್್​ಗೆ ಮರಳಿದರೂ, 3ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಳ್ಳುವಲ್ಲಿ ಸ್ವಲ್ಪದರಲ್ಲಿಯೇ ಎಡವಿದರು. ಪ್ರಶಸ್ತಿ ಹೋರಾಟದಲ್ಲಿ ಡಬಲ್ ಫಾಲ್ಟ್​ಗಳೇ ಮುಗುರುಜಾಗೆ ಮಾರಕವಾದವು.

ತಂದೆಯೇ ಮೊದಲ ಗುರು

ರಷ್ಯಾದ ಮಾಸ್ಕೋದಲ್ಲಿ ಸೋಫಿಯಾ ಕೆನಿನ್ ಜನಿಸಿದ ಕೆಲವೇ ತಿಂಗಳಲ್ಲಿ ಅವರ ಕುಟುಂಬ ಅಮೆರಿಕಕ್ಕೆ ವಲಸೆ ಹೋಗಿತ್ತು. 6ನೇ ವಯಸ್ಸಿನಲ್ಲೇ ರ್ಯಾಕೆಟ್ ಹಿಡಿದ ಸೋಫಿಯಾ, 12ನೇ ವಯಸ್ಸಿನಿಂದ ವಿವಿಧ ಟೂರ್ನಿಗಳನ್ನು ಆಡಲಾರಂಭಿಸಿದರು. ತಂದೆ ಅಲೆಕ್ಸಾಂಡರ್ ಕೆನಿನ್ ಅವರೇ ಮೊದಲ ಕೋಚ್. 14ನೇ ವಯಸ್ಸಿನಲ್ಲಿ ಐಟಿಎಫ್ ಸರ್ಕ್ಯೂಟ್​ನಲ್ಲಿ ಮೊದಲ ವೃತ್ತಿಪರ ಪಂದ್ಯವಾಡಿದರು. 2015ರಲ್ಲಿ 16ನೇ ವಯಸ್ಸಿನಲ್ಲಿ ಯುಎಸ್ ಓಪನ್ ಮೂಲಕ ಗ್ರಾಂಡ್ ಸ್ಲಾಂಗೆ ಪದಾರ್ಪಣೆ ಮಾಡಿದ್ದರು. 2018ರಲ್ಲಿ ಡಬ್ಲ್ಯುಟಿಎ ರ್ಯಾಂಕಿಂಗ್​ನಲ್ಲಿ ಅಗ್ರ 50ರೊಳಗೆ ಸ್ಥಾನ ಪಡೆದಿದ್ದ ಕೆನಿನ್, ಮುಂದಿನ ವಾರ ಅಗ್ರ 10ರೊಳಗೆ ಪ್ರವೇಶಿಸಲಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್​ಗೆ ಮುನ್ನ ಹೋಬರ್ಟ್​ನಲ್ಲೇ ಚೊಚ್ಚಲ ಡಬ್ಲ್ಯುಟಿಎ ಪ್ರಶಸ್ತಿ ಜಯಿಸಿದ್ದ ಕೆನಿನ್, ಫ್ರೆಂಚ್ ಓಪನ್​ನಲ್ಲಿ ತಮ್ಮ ಆದರ್ಶ ಆಟಗಾರ್ತಿ ಸೆರೇನಾ ವಿಲಿಯಮ್ಸ್​ಗೆ ಸೋಲುಣಿಸಿ ಸುದ್ದಿಮಾಡಿದ್ದರು. ನವೊಮಿ ಒಸಾಕ ಮತ್ತು ಆಶ್ಲೆಗ್ ಬಾರ್ಟಿ ಅವರಂಥ ಸಮಕಾಲೀನ ಯುವತಾರೆಯರ ವಿರುದ್ಧವೂ ಕೆನಿನ್ ಗೆಲುವು ದಾಖಲಿಸಿದ್ದಾರೆ.

21 ವರ್ಷ 80 ದಿನ ವಯಸ್ಸಿನ ಸೋಫಿಯಾ ಕೆನಿನ್, ಕಳೆದ ವರ್ಷದ ಚಾಂಪಿಯನ್ ಜಪಾನ್​ನ 22 ವರ್ಷದ ನವೋಮಿ ಒಸಾಕಗಿಂತ ಕಿರಿಯರು. 2008ರಲ್ಲಿ ಮರಿಯಾ ಶರಪೋವಾ 20ನೇ ವಯಸ್ಸಿನಲ್ಲೇ ಪ್ರಶಸ್ತಿ ಗೆದ್ದ ಬಳಿಕ ಸೋಫಿಯಾ ಅತಿ ಕಿರಿಯ ಚಾಂಪಿಯನ್ ಆಗಿದ್ದಾರೆ.

ನನ್ನ ಕನಸು ಈಗ ಅಧಿಕೃತವಾಗಿ ನನಸಾಗಿದೆ. ಈ ಅನುಭವವನ್ನು ಬಣ್ಣಿಸಲಾರೆ. ಇದು ನಿಜಕ್ಕೂ ಅಮೋಘ. ನೀವು ಕನಸು ಕಾಣುತ್ತಿದ್ದರೆ ಅದರ ಬೆನ್ನುಹತ್ತಿ. ಅದು ನನಸಾಗುತ್ತದೆ. | ಸೋಫಿಯಾ ಕೆನಿನ್ ಚಾಂಪಿಯನ್ ಈ ಕ್ಷಣದಲ್ಲಿ ನನಗೆ ಮುಖದಲ್ಲಿ ದೊಡ್ಡ ನಗು ಬೀರಲು ಕಷ್ಟವಾಗುತ್ತಿದೆ. ಆದರೆ ನಾನು ಒಳಗಿಂದ ನಗುತ್ತಿದ್ದೇನೆ. ಕಳೆದೆರಡು ವರ್ಷಗಳಲ್ಲಿ ಕಠಿಣ ದಿನಗಳನ್ನು ಕಳೆದ ಬಳಿಕ ಇದೀಗ ನಿರಾಳವಾಗಿದ್ದೇನೆ. | ಗಾರ್ಬಿನ್ ಮುಗುರುಜಾ ರನ್ನರ್​ಅಪ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net