

Smriti Mandhana: ಇಂದು ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ, ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಶ್ರೇಷ್ಠ ಮೈಲಿಗಲ್ಲು ಸಾಧಿಸಿದ್ದಾರೆ.
ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಂಧಾನ 5,000 ರನ್‌ಗಳ ಮೈಲಿಗಲ್ಲು ದಾಟಿದ್ದಾರೆ. ಈ ಹಿಂದೆ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಹೆಸರಲ್ಲಿ ಈ ದಾಖಲೆಯಿತ್ತು. ಆದರೆ, ಇಂದಿನ ಪಂದ್ಯದಲ್ಲಿ ಹೆಚ್ಚುವರಿ 58 ರನ್ ಸಿಡಿಸುವ ಮೂಲಕ ಸ್ಮೃತಿ, ಮಿಥಾಲಿ ಅವರ ರೆಕಾರ್ಡ್ ಅನ್ನು ಧೂಳಿಪಟ ಮಾಡಿದ್ದಾರೆ. ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗೆ ಈ ದಾಖಲೆಯನ್ನು ಸಾಧಿಸಿದ ಏಕೈಕ ಭಾರತೀಯ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ ಎಂದು ಹೇಳಲಾಗಿತ್ತು. ಆದರೀಗ, ಅವರ ದಾಖಲೆಯನ್ನು ಮಂಧಾನ ಮುರಿದಿರುವುದು ಹಲವರ ಹುಬ್ಬೇರಿಸಿದೆ. ಪ್ರಸ್ತುತ, ಈ ದಾಖಲೆಗೈದ ಎರಡನೇ ಭಾರತೀಯ ಮಹಿಳಾ ಆಟಗಾರ್ತಿಯಾಗಿ ಸ್ಮೃತಿ ಹೊರಹೊಮ್ಮಿದ್ದಾರೆ.
ಮಂಧಾನ ಈ ದಾಖಲೆಯನ್ನು ಸಾಧಿಸಿದ ಅತ್ಯಂತ ವೇಗದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕೇವಲ 112 ಇನ್ನಿಂಗ್ಸ್‌ಗಳಲ್ಲಿ 5,000 ರನ್‌ಗಳನ್ನು ತಲುಪಿದ ಭಾರತೀಯ ಮಹಿಳಾ ಕ್ರಿಕೆಟ್‌ನ ಅತ್ಯಂತ ವೇಗದ ಬ್ಯಾಟ್ಸ್‌ವುಮನ್ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧವೂ ಅವರು ವಿಶಿಷ್ಟ ದಾಖಲೆಯನ್ನು ಹೊಂದಿದ್ದಾರೆ. ಇಲ್ಲಿಯವರೆಗೆ ಆಸ್ಟ್ರೇಲಿಯಾ ವಿರುದ್ಧ ಒಟ್ಟು 10 ಅರ್ಧಶತಕಗಳನ್ನು ಗಳಿಸಿರುವ ಮಂಧಾನ, ಕಾಂಗರೂ ಬೌಲರ್‌ಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಮೂಲಕ ಟೀಮ್ ಇಂಡಿಯಾಗೆ ಆನೆ ಬಲ ನೀಡಿದ್ದಾರೆ.
ಸ್ಮೃತಿ ಭರ್ಜರಿ ಪ್ರದರ್ಶನದೊಂದಿಗೆ, ಭಾರತ ತಂಡವು ವಿಶ್ವಕಪ್‌ನಲ್ಲಿ ಉತ್ತಮ ವೇಗವನ್ನು ಪಡೆದುಕೊಂಡಿದೆ. ಈ ದಾಖಲೆಯನ್ನು ಸಾಧಿಸಿದ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜರು, ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸ್ಮೃತಿ ಮಂಧಾನಗೆ ಜಾಲತಾಣಗಳಲ್ಲಿ ಅಭಿನಂದಿಸುತ್ತಿದ್ದಾರೆ,(ಏಜೆನ್ಸೀಸ್).