

ನವದೆಹಲಿ: ಎರಡು ಬಾರಿಯ ಚಾಂಪಿಯನ್ ಕರ್ನಾಟಕ ಹಾಗೂ ಬಂಗಾಳ ತಂಡಗಳು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಗುರುವಾರ ಎದುರಾಗಲಿವೆ. ರಾಷ್ಟ್ರ ರಾಜಧಾನಿಯ ವಾಯು ಮಾಲಿನ್ಯದ ಸವಾಲಿನ ನಡುವೆಯೂ ದೇಶೀಯ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಪಂದ್ಯಗಳಿಗೆ ಅರುಣ್ ಜೇಟ್ಲಿ ಹಾಗೂ ಪಾಲಂನ ವಾಯು ಸೇನಾ ಮೈದಾನಗಳು ಸಜ್ಜಾಗಿವೆ. 8 ತಂಡಗಳಿಗೆ ಪರಸ್ಪರ ಕಾದಾಟದ ಜತೆಗೆ ವಾಯು ಮಾಲಿನ್ಯ ವಿರುದ್ಧದ ಹೋರಾಟವೇ ದೊಡ್ಡ ಸವಾಲಾಗಿದೆ.
ಕರ್ನಾಟಕಕ್ಕೆ ಸೇಡಿನ ತವಕ: ಗುವಾಹಟಿಯಲ್ಲಿ ನಡೆದ ಲೀಗ್ ಹಂತದ ಹೋರಾಟದಲ್ಲಿ ಕಡೇ ಪಂದ್ಯದಲ್ಲಿ ನೀರಸ ನಿರ್ವಹಣೆಯಿಂದಾಗಿ ಬಂಗಾಳ ತಂಡಕ್ಕೆ ಶರಣಾಗಿ ನೇರವಾಗಿ ಎಂಟರ ಘಟ್ಟಕ್ಕೇರುವ ಅವಕಾಶ ತಪ್ಪಿಸಿಕೊಂಡಿದ್ದ ಕರ್ನಾಟಕಕ್ಕೆ ಇದೀಗ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ. ಅನುಭವಿ ಮನೀಷ್ ಪಾಂಡೆ, ಕರುಣ್ ನಾಯರ್ ಸೌರಾಷ್ಟ್ರ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಮೂಡಿಸಿದ್ದರು. ಅಭಿನವ್ ಮನೋಹರ್ ಚುಟುಕು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಭರ್ಜರಿ ನಿರ್ವಹಣೆ ಮೂಲಕ ಗಮನಸೆಳೆದಿದ್ದಾರೆ. ಇದರಿಂದ ಮಧ್ಯಮ ಕ್ರಮಾಂಕಕ್ಕೆ ಮತ್ತಷ್ಟು ಬಲಬಂತಾಗಿದೆ. ಅನಿರುದ್ಧ ಜೋಶಿ ಕೂಡ ಉತ್ತಮ ಲಯದಲ್ಲಿದ್ದಾರೆ.
ಸ್ಪಿನ್ನರ್ ಜೆ. ಸುಚಿತ್, ಲೆಗ್ ಸ್ಪಿನ್ನರ್ ಕೆ.ಸಿ. ಕಾರ್ಯಪ್ಪ, ವೇಗಿಗಳಾದ ವೈಶಾಕ್ ವಿಜಯ್‌ಕುಮಾರ್, ವಿ. ಕೌಶಿಕ್ ಹಾಗೂ ವಿದ್ಯಾಧರ್ ಪಾಟೀಲ್ ಒಳಗೊಂಡ ಬೌಲಿಂಗ್ ಪಡೆ ಎದುರಾಳಿ ತಂಡದ ವಿರುದ್ಧ ಮೇಲುಗೈ ಸಾಧಿಸಲು ಸಜ್ಜಾಗಿದೆ. ಮತ್ತೊಂದೆಡೆ, ನಾಯಕ ಅಭಿಮನ್ಯು ಈಶ್ವರನ್ ದ.ಆಫ್ರಿಕಾ ಪ್ರವಾಸಕ್ಕೆ ರಾಷ್ಟ್ರೀಯ ಎ ತಂಡದೊಂದಿಗೆ ತೆರಳಿದ್ದಾರೆ. ಪ್ರಮುಖ ಬ್ಯಾಟರ್ ಅನುಪಸ್ಥಿತಿ ಬಂಗಾಳ ತಂಡಕ್ಕೆ ಕಾಡಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 1
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1
*ಇತರ ಕ್ವಾರ್ಟರ್ ಫೈನಲ್ಸ್
ತಮಿಳುನಾಡು -ಕೇರಳ
ಆರಂಭ: ಬೆಳಗ್ಗೆ 8.30
ರಾಜಸ್ಥಾನ-ವಿದರ್ಭ
ಆರಂಭ: ಬೆಳಗ್ಗೆ 8.30
ಗುಜರಾತ್-ಹೈದರಾಬಾದ್
ಆರಂಭ: ಮಧ್ಯಾಹ್ನ 1