ಲಕ್ಷ್ಯ ಸೇನ್​ಗೆ ಸತತ 2ನೇ ಪ್ರಶಸ್ತಿ; ಕುಮಾಮೊಟೊ ಮಾಸ್ಟರ್ಸ್​ ಜಪಾನ್​ ಟೂರ್ನಿಯಲ್ಲೂ ಚಾಂಪಿಯನ್​

ಅವರು ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯರೆಂಬ ಇತಿಹಾಸ ಬರೆದರು.
badminton
ಕುಮಾಮೊಟೊ ಮಾಸ್ಟರ್ಸ್​ ಜಪಾನ್​ ಪ್ರಶಸ್ತಿಯೊಂದಿಗೆ ಲಕ್ಷ್ಯ ಸೇನ್ಏಜೆನ್ಸಿ
Published on: 

ಕುಮಾಮೊಟೊ: ಬಿಡಬ್ಲ್ಯುಎಫ್​ ಟೂರ್​ನಲ್ಲಿ ತನ್ನ ಭರ್ಜರಿ ನಿರ್ವಹಣೆ ಮುಂದುವರಿಸಿರುವ ಭಾರತದ ತಾರೆ ಲಕ್ಷ್ಯ ಸೇನ್​, ತಾನಾಡಿದ ಸತತ 2ನೇ ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿನ ಸಾಧನೆ ಮಾಡಿದ್ದಾರೆ. ಕುಮಾಮೊಟೊ ಮಾಸ್ಟರ್ಸ್​ ಜಪಾನ್​ ಸೂಪರ್​-500 ಟೂರ್ನಿಯ ಪುರುಷರ ಸಿಂಗಲ್ಸ್​ ವಿಭಾಗದ ಫೈನಲ್​ನಲ್ಲಿ ಸ್ಥಳಿಯ ತಾರೆ ಕೋಕಿ ವತನಾಬೆಗೆ ಸೋಲುಣಿಸುವ ಮೂಲಕ ಲಕ್ಷ್ಯ ಸೇನ್​ ಚಾಂಪಿಯನ್​ ಆಗಿ ಹೊರಹೊಮ್ಮಿದರು. ಅವರು ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯರೆಂಬ ಇತಿಹಾಸ ಬರೆದರು. 25 ವರ್ಷದ ಲಕ್ಷ್ಯ ಕಳೆದ ವಾರ ಹೈಲೋ ಓಪನ್​ ಜಯಿಸಿದ್ದರು.

ವಿಶ್ವ ನಂ. 13 ಲಕ್ಷ್ಯ ಸೇನ್​ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ವತನಾಬೆ ವಿರುದ್ಧ 13-21, 21-18, 21-14 ಗೇಮ್​ಗಳಿಂದ 64 ನಿಮಿಷಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಲಕ್ಷ್ಯ ಸೇನ್​ ವರ್ಷಾಂತ್ಯದಲ್ಲಿ ಹಾಂಗ್​ರೆೌನಲ್ಲಿ ನಡೆಯಲಿರುವ ಬಿಡಬ್ಲ್ಯುಎಫ್ ವರ್ಲ್ಟ್​ ಟೂರ್​ ಫೈನಲ್ಸ್​ಗೆ ಅರ್ಹತೆ ಪಡೆಯುವ ಸನಿಹ ತಲುಪಿದ್ದಾರೆ.

"ಇಲ್ಲಿ ಪ್ರಶಸ್ತಿ ಜಯಿಸಿರುವುದು ಅತ್ಯಂತ ಸಂತಸ ನೀಡಿದೆ. ಕಳೆದ ವರ್ಷ ಸೆಮೀಸ್​ನಲ್ಲೇ ಹೊರಬಿದ್ದಿದ್ದೆ. ಈ ವರ್ಷ ಫಲಿತಾಂಶ ಸುಧಾರಿಸಿರುವ ಖುಷಿ ಇದೆ. ಸತತ 2ನೇ ಪ್ರಶಸ್ತಿ ಜಯಿಸಿರುವೆ. ಇದೇ ಫಾರ್ಮ್​ ಮುಂದುವರಿಸಲು ಬಯಸುವೆ' ಎಂದು ಉತ್ತರಾಖಂಡದ ಲಕ್ಷ್ಯ ಸೇನ್​ ತಿಳಿಸಿದ್ದಾರೆ.

ವರ್ಲ್ಡ್​ ಟೂರ್ ಫೈನಲ್ಸ್​ ಅರ್ಹತೆ ಸನಿಹ

ಈ ಟೂರ್ನಿಗೆ ಮುನ್ನ ಬಿಡಬ್ಲ್ಯುಎಫ್​ ವರ್ಲ್ಟ್​ ಟೂರ್​ ಫೈನಲ್ಸ್​ನ ಅಂಕಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದ ಲಕ್ಷ್ಯ ಸೇನ್​. ಪ್ರಶಸ್ತಿ ಗೆಲುವಿನೊಂದಿಗೆ 9,200 ಅಂಕ ಕಲೆಹಾಕಿದ್ದಾರೆ. ಇದರೊಂದಿಗೆ ಅವರು ಒಟ್ಟಾರೆ 74,180 ಅಂಕಗಳೊಂದಿಗೆ 6ನೇ ಸ್ಥಾನಕ್ಕೇರಿದ್ದಾರೆ. ಅಂಕಪಟ್ಟಿಯ ಅಗ್ರ 8 ಆಟಗಾರರು ಫೈನಲ್ಸ್​ ಟೂರ್ನಿಗೆ ಅರ್ಹತೆ ಗಳಿಸಲಿದ್ದಾರೆ. ವರ್ಷಾಂತ್ಯದ ಇನ್ನೆರಡು ಟೂರ್ನಿಗಳು ಬಾಕಿ ಇದ್ದು, ಅಲ್ಲಿಯವರೆಗೆ ಅಗ್ರ 8ರಲ್ಲಿ ಉಳಿದುಕೊಂಡರೆ ಲಕ್ಷ್ಯಗೆ ಅರ್ಹತೆ ಒಲಿಯಲಿದೆ.