

ವಿಜಯವಾಡ: ನಾಯಕತ್ವದ ಮೊದಲ ಪಂದ್ಯದಲ್ಲೇ ರವಿಚಂದ್ರನ್ ಸ್ಮರಣ್ (126 ರನ್, 218 ಎಸೆತ, 11 ಬೌಂಡರಿ, 1 ಸಿಕ್ಸರ್) ಸ್ಮರಣೀಯ ಶತಕ ಸಿಡಿಸಿದ್ದಾರೆ. ಈ ಮೂಲಕ ಕರ್ನಾಟಕ ತಂಡ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ 92ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಆತಿಥೇಯ ಆಂಧ್ರ ವಿರುದ್ಧ ಆರಂಭಿಕ ಆಘಾತದಿಂದ ಪುಟಿದೆದ್ದು ಉತ್ತಮ ಮೊತ್ತ ಕಲೆಹಾಕಲು ನೆರವಾಗಿದ್ದಾರೆ. ಆಂಧ್ರಕ್ಕೂ ಆರಂಭಿಕ ಆಘಾತ ನೀಡಿರುವ ಆರ್. ವಿನಯ್ ಕುಮಾರ್ ತರಬೇತಿಯ ಕರ್ನಾಟಕ ತಂಡ ಪಂದ್ಯದ ಮೊದಲ ದಿನದ ಗೌರವ ಸಂಪಾದಿಸಿದೆ.
ಮುಲಪಾಡುವಿನ ಡಾ. ಗೋಕರಾಜು ಲೈಲಾ ಗಂಗರಾಜು ಎಸಿಎ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಆರಂಭಗೊಂಡ ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಕರ್ನಾಟಕ ತಂಡ, 8 ಓವರ್ನೊಳಗೆ ಅಗ್ರ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ 23 ವರ್ಷದ ಎಡಗೈ ಬ್ಯಾಟರ್ ಸ್ಮರಣ್ ಸಿಡಿಸಿದ ಜವಾಬ್ದಾರಿಯುತ ಶತಕ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ಶ್ರೀಜಿತ್ (58 ರನ್, 82 ಎಸೆತ, 3 ಬೌಂಡರಿ, 3 ಸಿಕ್ಸರ್) ನೀಡಿದ ಸಮರ್ಥ ಬೆಂಬಲದ ಬಲದಿಂದ ಕರ್ನಾಟಕ ತಂಡ ಚೇತರಿಸಿಕೊಂಡಿತು. ಅಂತಿಮವಾಗಿ ಕರ್ನಾಟಕ 82.2 ಓವರ್ಗಳಲ್ಲಿ 274 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಆಂಧ್ರ ದಿನದಂತ್ಯಕ್ಕೆ 5 ಓವರ್ಗಳಲ್ಲಿ 2 ವಿಕೆಟ್ಗೆ 16 ರನ್ ಗಳಿಸಿ ಸಂಕಷ್ಟದಲ್ಲಿದೆ. ಆಂಧ್ರ ಸದ್ಯ 258 ರನ್ ಹಿನ್ನಡೆಯಲ್ಲಿದೆ. ಆರಂಭಿಕ ಅಭಿಷೇಕ್ ರೆಡ್ಡಿ (10*) ಮತ್ತು ಶೇಕ್ ರಶೀದ್ (1*) ಕ್ರೀಸ್ನಲ್ಲಿದ್ದಾರೆ. ಎಡಗೈ ಸ್ಪಿನ್ನರ್ಗಳಾದ ಶಿಖರ್ ಶೆಟ್ಟಿ ಮತ್ತು ಮಾಧವ್ ಬಜಾಜ್ ತಲಾ 1 ವಿಕೆಟ್ ಕಬಳಿಸಿದರು.
ಸ್ಮರಣೀಯ ಇನಿಂಗ್ಸ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ರಾಜ್ಯದ ನಿರ್ಧಾರ ಆರಂಭದಲ್ಲಿ ಕೈಕೊಟ್ಟಿತು. ಅನುಭವಿಗಳಾದ ಕೆಎಲ್ ರಾಹುಲ್ (4), ಮಯಾಂಕ್ ಅಗರ್ವಾಲ್ (5), ಕರುಣ್ ನಾಯರ್ (8) ಜತೆಗೆ ಕೆವಿ ಅನೀಶ್ (0) ತಂಡದ ಮೊತ್ತ 22 ರನ್ ಆಗುವಷ್ಟರಲ್ಲೇ ಪೆವಿಲಿಯನ್ಗೆ ಮರಳಿದರು. ಆಗ ಜತೆಗೂಡಿದ ಸ್ಮರಣ್ ಮತ್ತು ಶ್ರೀಜಿತ್ ಜೋಡಿ 5ನೇ ವಿಕೆಟ್ಗೆ 179 ಎಸೆತಗಳಲ್ಲಿ 111 ರನ್ ಜತೆಯಾಟವಾಡುವ ಮೂಲಕ ಚೇತರಿಕೆ ಒದಗಿಸಿತು. ಶ್ರೀಜಿತ್ ಔಟಾದ ಬಳಿಕ ಬಾಲಂಗೋಚಿಗಳು ಸ್ಮರಣ್ಗೆ ಉತ್ತಮ ಬೆಂಬಲ ನೀಡಿದರು. ಪದಾರ್ಪಣೆ ಪಂದ್ಯ ಆಡುತ್ತಿರುವ ಮಾಧವ್ ಬಜಾಜ್ (33) 8ನೇ ವಿಕೆಟ್ಗೆ 59 ರನ್ ಜತೆಯಾಟದಲ್ಲಿ ಪಾಲ್ಗೊಂಡು, ಸ್ಮರಣ್ಗೆ ಶತಕ ಪೂರೈಸಲು ನೆರವಾದರು. ನಂತರ ಶಿಖರ್ ಶೆಟ್ಟಿ (13) ಜತೆ 9ನೇ ವಿಕೆಟ್ಗೆ 41 ರನ್ ಸೇರಿಸಿದ ಸ್ಮರಣ್ ಮೊತ್ತವನ್ನು 270ರ ಗಡಿ ದಾಟಿಸಿದರು. ಅಂತಿಮವಾಗಿ ಎಡಗೈ ಸ್ಪಿನ್ನರ್ ಲಲಿತ್ ಮೋಹನ್ ಎಸೆತದಲ್ಲಿ ಬೌಲ್ಡ್ ಆಗಿ ಸ್ಮರಣ್ ತನ್ನ ಸ್ಮರಣೀಯ ಇನಿಂಗ್ಸ್ ಮುಗಿಸಿದರು. ಮರುಓವರ್ನಲ್ಲಿ ರಾಜ್ಯದ ಇನಿಂಗ್ಸ್ಗೂ ತೆರೆಬಿದ್ದಿತು.
ಕರ್ನಾಟಕ: 82.2 ಓವರ್ಗಳಲ್ಲಿ 274 (ರಾಹುಲ್ 4, ಮಯಾಂಕ್ 5, ಅನೀಶ್ 0, ಕರುಣ್ 8, ಆರ್. ಸ್ಮರಣ್ 126, ಶ್ರೀಜಿತ್ 58, ಮನ್ವಂತ್ 13, ರಿತೇಶ್ 6, ಮಾಧವ್ 33, ಶಿಖರ್ 13, ಸೌರಭ್ 69ಕ್ಕೆ 3, ಸಾಯಿತೇಜ್ 20ಕ್ಕೆ 2, ಶಶಿಕಾಂತ್ 10ಕ್ಕೆ 2, ಲಲಿತ್ ಮೋಹನ್ 87ಕ್ಕೆ 2),
ಆಂಧ್ರ: 5 ಓವರ್ಗಳಲ್ಲಿ 2 ವಿಕೆಟ್ಗೆ 16 (ಹೇಮಂತ್ ರೆಡ್ಡಿ 1, ತ್ರಿಪುರಣ 4, ಅಭಿಷೇಕ್ ರೆಡ್ಡಿ 10*, ಶೇಕ್ ರಶೀದ್ 1*, ಶಿಖರ್ ಶೆಟ್ಟಿ 8ಕ್ಕೆ 1, ಮಾಧವ್ ಬಜಾಜ್ 3ಕ್ಕೆ 1).
*57: ಆರ್. ಸ್ಮರಣ್ ಕರ್ನಾಟಕ ತಂಡವನ್ನು ಮುನ್ನಡೆಸಿದ 57ನೇ ನಾಯಕ ಎನಿಸಿದರು.
*8: ಸ್ಮರಣ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 8ನೇ ಮತ್ತು ರಣಜಿಯಲ್ಲಿ 7ನೇ ಶತಕ ಸಿಡಿಸಿದರು.
*7: ಸ್ಮರಣ್ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಕರ್ನಾಟಕದ 7ನೇ ಆಟಗಾರ ಎನಿಸಿದರು. ಬಿ.ಕೆ. ಗರುಡಾಚಾರ್, ಬ್ರಿಜೇಶ್ ಪಟೇಲ್, ರೋಜರ್ ಬಿನ್ನಿ, ರಾಬಿನ್ ಉತ್ತಪ್ಪ, ಕರುಣ್ ನಾಯರ್, ದೇವದತ್ ಪಡಿಕ್ಕಲ್ ಹಿಂದಿನ ಸಾಧಕರು.
ಮೂವರು ಪದಾರ್ಪಣೆ
ಕರ್ನಾಟಕ ಪರ ಮೈಸೂರಿನ ಎಲ್. ಮನ್ವಂತ್ ಕುಮಾರ್, ಕಲಬುರಗಿಯ ಮಾಧವ್ ಪಿ. ಬಜಾಜ್ ಮತ್ತು ಬೆಂಗಳೂರಿನ ರಿತೇಶ್ ಭಟ್ಕಳ್ ಕ್ರಮವಾಗಿ 318, 319 ಮತ್ತು 320ನೇ ಆಟಗಾರರಾಗಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು. ಆನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅನಾರೋಗ್ಯದಿಂದಾಗಿ ಪಂದ್ಯಕ್ಕೆ ಅಲಭ್ಯರಾದರು. ಹೀಗಾಗಿ, 15ರ ಬಳಗದಲ್ಲಿರದ 26 ವರ್ಷದ ಎಡಗೈ ಸ್ಪಿನ್ನರ್ ಮಾಧವ್ ಬಜಾಜ್ 11ರ ಬಳಗದಲ್ಲಿ ಸ್ಥಾನ ಪಡೆದರು. 33 ವರ್ಷದ ಆಲ್ರೌಂಡರ್ ರಿತೇಶ್ ಭಟ್ಕಳ್ ರಾಜ್ಯದ ಪರ ರಣಜಿ ಪದಾರ್ಪಣೆ ಮಾಡಿದ ಅತಿ ಹಿರಿಯ ಆಟಗಾರ ಎನಿಸಿದರು. ವೇಗದ ಬೌಲಿಂಗ್ ಆಲ್ರೌಂಡರ್ ಆಗಿರುವ 22 ವರ್ಷದ ಮನ್ವಂತ್ ಕುಮಾರ್ ರಾಜ್ಯದ ಪರ ಟಿ20, ಏಕದಿನ ಆಡಿದ ಬಳಿಕ ರಣಜಿಯಲ್ಲೂ ಅವಕಾಶ ಪಡೆದರು.
ಜೈಸ್ವಾಲ್ ಡಕೌಟ್, ಮಿಂಚಿದ ಜಡೇಜಾ
ಭಾರತ ಟೆಸ್ಟ್ ತಂಡದ ಆಟಗಾರರು ರಣಜಿ ಟ್ರೋಫಿಯ ಮೊದಲ ದಿನ ಮಿಶ್ರಲ ಎದುರಿಸಿದರು. ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ ಚಂಡೀಗಢ ವಿರುದ್ಧ ವಾಂಖೆಡೆಯಲ್ಲಿ ಆತಿಥೇಯ ಮುಂಬೈ ಪರ 13 ಎಸೆತ ಎದುರಿಸಿ ಖಾತೆ ತೆರೆಯದೆ ಔಟಾದರು. ಆಲ್ರೌಂಡರ್ ರವೀಂದ್ರ ಜಡೇಜಾ (72*) ಛತ್ತೀಸ್ಗಢ ವಿರುದ್ಧ ಸೌರಾಷ್ಟ್ರಕ್ಕೆ ಆಸರೆಯಾದರು. ಅನುಭವಿ ವೇಗಿ ಮೊಹಮದ್ ಶಮಿ ಬಂಗಾಳ ಪರ 4 ವಿಕೆಟ್ ಕಬಳಿಸಿ, ದೆಹಲಿಗೆ ನಿಯಂತ್ರಣ ಹೇರಿದರು. ಮಹಾರಾಷ್ಟ್ರ ಪರ ಪೃಥ್ವಿ ಶಾ 70 ರನ್ ಗಳಿಸಿದರು.