

ಕಲಬುರಗಿ: ಗುಲಾಬ್ ವಾಡಿ ಎಂಬ ಸ್ಲಂ ಬಡಾವಣೆ ಯುವ ಕ್ರಿಕೆಟಿಗ ಶಶಿಕುಮಾರ್ ಕಾಂಬ್ಳೆ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ. ಕಲಬುರಗಿ ಜಿಲ್ಲೆಯಿಂದ ರಣಜಿ ತಂಡಕ್ಕೆ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಶಶಿಕುಮಾರ್ ಪಾತ್ರರಾಗಿದ್ದಾರೆ.
ಶಶಿಕುಮಾರ್ ತಂದೆ ಸುಭಾಷ್ ಕಾಂಬ್ಳೆ ಹಾಗೂ ತಾಯಿ ರತ್ನಮ್ಮ ಕಾಂಬ್ಳೆ ಅವರು ಇಂದಿಗೂ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೋಚ್ ವಿಜಯಕುಮಾರ ದೇಗಲಮಡಿ ಗರಡಿಯಲ್ಲಿ ಶಶಿ ಪಳಗಿದ್ದು, ಹಿರಿಯ ಆಟಗಾರರು ಸಾಕಷ್ಟು ಸಲಹೆಗಳನ್ನು ನೀಡಿ ಬೆಳೆಸಿದ್ದಾರೆ.
ಕಲಬುರಗಿ ಜಿಲ್ಲೆಯಿಂದ 1998ರಲ್ಲಿ ರಘುತ್ತಮ ನವಲಿ ಹಾಗೂ 2000ರಲ್ಲಿ ವಿಜಯ ಮಾಡ್ಯಾಳಕರ್ ರಣಜಿಗೆ ಆಯ್ಕೆಯಾಗಿದ್ದರು. ಇದೀಗ ಬರೋಬ್ಬರಿ 23 ವರ್ಷಗಳ ಕಲಬುರಗಿಯ ಆಟಗಾರ ರಣಜಿಯಲ್ಲಿ ಸ್ಥಾನ ಪಡೆದಂತಾಗಿದೆ.
ಬಲಗೈ ಆಫ್ ಸ್ಪಿನ್ನರ್ ಆಗಿರುವ ಶಶಿಕುಮಾರ್ ಈ ಹಿಂದೆ ವಿಜಯ್ ಮರ್ಚೆಂಟ್ ಟ್ರೋಫಿ, ಜೆಡ್‌ಸಿಎ, ವಿನೂ ಮಂಕಡ್, ಕೂಚ್ ಬಿಹಾರ್, ಸಿಕೆ ನಾಯ್ಡು ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಮೊದಲ ಡಿವಿಷನ್ ಲೀಗ್‌ನಲ್ಲಿ ಸ್ವಸ್ತಿಕ್ ಯೂನಿಯನ್ 1 ತಂಡವನ್ನು ಪ್ರತಿನಿಧಿಸುತ್ತಿದ್ದು, 9 ಪಂದ್ಯಗಳಲ್ಲಿ 21 ವಿಕೆಟ್ ಪಡೆದು ಮಿಂಚಿದ್ದಾರೆ.