ಸ್ಯಾಮ್ ಕರ್ರನ್ ಆಲ್ರೌಂಡ್ ಆಟಕ್ಕೆ ಒಲಿದ ಜಯ: ರಾಜಸ್ಥಾನಕ್ಕೆ ಸತತ 4ನೇ ಸೋಲಿನ ಆಘಾತ

New-Project-24
Published on

ಗುವಾಹಟಿ: ನಾಯಕ ಸ್ಯಾಮ್ ಕರ‌್ರನ್ (63* ರನ್, 41 ಎಸೆತ, 5 ಬೌಂಡರಿ, 3 ಸಿಕ್ಸರ್, 24ಕ್ಕೆ 2 ವಿಕೆಟ್) ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-17ರಲ್ಲಿ ರಾಜಸ್ಥಾನ ರಾಯಲ್ಸ್ ಎದುರು 5 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಸ್ಯಾಮ್ ಕರ‌್ರನ್ ಬಳಗ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಿಂದ 9ನೇ ಸ್ಥಾನಕ್ಕೇರಿದರೆ, ಸಂಜು ಸ್ಯಾಮ್ಸನ್ ಬಳಗ ಪ್ಲೇಆ್ ಸ್ಥಾನ ಖಾತ್ರಿಪಡಿಸಿಕೊಂಡಿರುವ ನಡುವೆ ಸತತ 4ನೇ ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಿದೆ.

ಬರ್ಸಾಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ ಸಾಧಾರಣ ಆರಂಭದೊಂದಿಗೆ ರನ್‌ಗಳಿಸಲು ಪರದಾಡಿತು. ರಿಯಾನ್ ಪರಾಗ್ ಆಸರೆಯಲ್ಲಿ ಅಂತಿಮವಾಗಿ 9 ವಿಕೆಟ್‌ಗೆ 144 ರನ್ ಕಲೆಹಾಕಿತು. ಪ್ರತಿಯಾಗಿ ಆವೇಶ್ ಖಾನ್ (28ಕ್ಕೆ 2) ಬಿಗಿ ದಾಳಿಯ ನಡುವೆಯೂ ಸ್ಯಾಮ್ ಕರ‌್ರನ್ ಹಾಗೂ ಜಿತೇಶ್ ಶರ್ಮ (22) ಜತೆಯಾಟದ ಬಲದಿಂದ ಪಂಜಾಬ್ 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 145 ರನ್‌ಗಳಿಸಿ ಜಯದ ಸಂಭ್ರಮ ಕಂಡಿತು.

ಸಾಧಾರಣ ಮೊತ್ತ ಬೆನ್ನಟ್ಟಿದ ಪಂಜಾಬ್ ಮೊದಲ ಓವರ್‌ನಲ್ಲಿ ಪ್ರಭ್‌ಸಿಮ್ರಾನ್ ಸಿಂಗ್ (6) ವಿಕೆಟ್ ಕಳೆದುಕೊಂಡಿತು. ಬಳಿಕ ಜಾನಿ ಬೇರ್‌ಸ್ಟೋ (14) ಹಾಗೂ ರಿಲೀ ರೋಸೌ (22) ಚೇಸಿಂಗ್‌ಗೆ ಬಲ ತುಂಬಿದರು. ಇವರಿಬ್ಬರು 2ನೇ ವಿಕೆಟ್‌ಗೆ 23 ಎಸೆತಗಳಲ್ಲಿ 30 ರನ್‌ಗಳಿಸಿದರು. ಆಗ ದಾಳಿಗಿಳಿದ ಆವೇಶ್ ಖಾನ್, ರೋಸೌ ಹಾಗೂ ಶಶಾಂಕ್ ಸಿಂಗ್ (0) ವಿಕೆಟ್ ಪಡೆದು ಕಡಿವಾಣ ಹೇರಿದರು. ಬೇರ್‌ಸ್ಟೋ ನಿರ್ಗಮನದ ಬಳಿಕ ಜತೆಯಾದ ಕರ‌್ರನ್ ಹಾಗೂ ಜಿತೇಶ್ ಶರ್ಮ ರಾಜಸ್ಥಾನ ಬೌಲರ್‌ಗಳ ಎದುರು ದಿಟ್ಟ ಹೋರಾಟ ನಡೆಸಿದರು. ಇವರಿಬ್ಬರು 46 ಎಸೆತಗಳಲ್ಲಿ 63 ರನ್‌ಗಳಿಸಿ ಚೇಸಿಂಗ್ ಸುಲಭಗೊಳಿಸಿದರು. 16ನೇ ಓವರ್‌ನಲ್ಲಿ ಜಿತೇಶ್ ವಿಕೆಟ್ ಪಡೆದ ಚಾಹಲ್ ತಿರುಗೇಟು ನೀಡಿದರು. ಆಗ ಕರ‌್ರನ್ ಜತೆಯಾದ ಇಂಪ್ಯಾಕ್ಟ್ ಪ್ಲೇಯರ್ ಆಶುತೋಷ್ ಶರ್ಮ (17*) ಯಶಸ್ವಿಯಾಗಿ ದಡ ಸೇರಿಸಿದರು. 7 ರನ್ ಅಗತ್ಯವಿದ್ದಾಗ ಸಿಕ್ಸರ್, ಸಿಂಗಲ್ ಕಸಿದ ಆಶುತೋಷ್ 7 ಎಸೆತ ಬಾಕಿಯಿರುವಂತೆಯೇ ಗೆಲುವು ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net