

ಮುಂಬೈ: ಸಂಘಟಿತ ಬೌಲಿಂಗ್ ನಿರ್ವಹಣೆಯ ಬಲ ಹಾಗೂ ನಾಯಕ ಅಜಿಂಕ್ಯ ರಹಾನೆ (58*ರನ್, 109 ಎಸೆತ, 4 ಬೌಂಡರಿ, 1 ಸಿಕ್ಸರ್) ಮತ್ತು ಮುಶೀರ್ ಖಾನ್ (51* ರನ್, 135 ಎಸೆತ, 3 ಬೌಂಡರಿ) ಅವಳಿ ಅರ್ಧಶತಕಗಳ ನೆರವಿನಿಂದ ಆತಿಥೇಯ ಮುಂಬೈ ತಂಡ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ೈನಲ್‌ನಲ್ಲಿ ವಿದರ್ಭ ಎದುರು ಬಿಗಿಹಿಡಿತ ಸಾಧಿಸಿದ್ದು, ಬೃಹತ್ ಮುನ್ನಡೆಯೊಂದಿಗೆ ಕಠಿಣ ಗುರಿ ನೀಡುವತ್ತ ಸಾಗಿದೆ. ಈ ಮೂಲಕ 42ನೇ ಬಾರಿ ಪ್ರಶಸ್ತಿ ಗೆಲ್ಲುವತ್ತ ದೃಷ್ಟಿ ನೆಟ್ಟಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಶಸ್ತಿ ಕಾದಾಟದಲ್ಲಿ 2ನೇ ದಿನವಾದ ಸೋಮವಾರ 3 ವಿಕೆಟ್‌ಗೆ 31 ರನ್‌ಗಳಿಂದ ದಿನದ ಆಟ ಮುಂದುವರಿಸಿದ ವಿದರ್ಭ, 45.3 ಓವರ್‌ಗಳಲ್ಲಿ 105 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. 119 ರನ್ ಮುನ್ನಡೆಯೊಂದಿಗೆ ಭೋಜನಾ ವಿರಾಮದ ಬಳಿಕ ಎರಡನೇ ಸರದಿ ಆರಂಭಿಸಿದ ಮುಂಬೈ, ದಿನದಂತ್ಯಕ್ಕೆ 50 ಓವರ್‌ಗಳಲ್ಲಿ 2 ವಿಕೆಟ್‌ಗೆ 141 ರನ್‌ಗಳಿಸಿದ್ದು, ಸದ್ಯ ಒಟ್ಟಾರೆ 260 ರನ್ ಮುನ್ನಡೆಯಲ್ಲಿದೆ. ಕೊನೆಗೂ ಲಯಕ್ಕೆ ಮರಳಿರುವ ಅನುಭವಿ ಅಜಿಂಕ್ಯ ರಹಾನೆ ಜತೆ ಮುಶೀರ್ ಖಾನ್ 3ನೇ ವಿಕೆಟ್‌ಗೆ 107 ರನ್‌ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮುಂಬೈ: 224 ಹಾಗೂ 2 ವಿಕೆಟ್‌ಗೆ 141 (ಪೃಥ್ವಿ ಷಾ 11, ಭೂಪೇನ್ 18, ಮುಶೀರ್ 51*, ಅಜಿಂಕ್ಯ ರಹಾನೆ 58*, ಯಶ್ 25ಕ್ಕೆ 1). ವಿದರ್ಭ: 45.3 ಓವರ್‌ಗಳಲ್ಲಿ 105 (ಅಥರ್ವ 23, ಆದಿತ್ಯ 19, ಯಶ್ ರಾಥೋಡ್ 27, ಅಕ್ಷಯ್ 5, ಯಶ್ ಠಾಕೂರ್ 16, ತನುಷ್ ಕೋಟ್ಯಾನ್ 7ಕ್ಕೆ 3, ಧವಳ್ ಕುಲಕರ್ಣಿ 15ಕ್ಕೆ 3, ಶಮ್ಸ್ ಮುಲಾನಿ 32ಕ್ಕೆ 3).
ಮುಂಬೈ ದಾಳಿಗೆ ತತ್ತರಿಸಿದ ವಿದರ್ಭ: ಬೆಳಗ್ಗೆ ಕ್ರಮವಾಗಿ 21 ಹಾಗೂ 0 ಬ್ಯಾಟಿಂಗ್ ಆರಂಭಿಸಿದ ಅಥರ್ವ ತೈಡೆ ಮತ್ತು ಆದಿತ್ಯ ಠಾಕ್ರೆ (19) ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಳಿಕ ಯಶ್ ರಾಥೋಡ್(27) ಹಾಗೂ ಆದಿತ್ಯ ಠಾಕ್ರೆ 5ನೇ ವಿಕೆಟ್‌ಗೆ 40 ರನ್ ಕಲೆಹಾಕಿ ಪ್ರತಿರೋಧ ತೋರಿದರು. ಆಗ ತನುಷ್ ಕೋಟ್ಯಾನ್ ಈ ಜೋಡಿಯನ್ನು ಬೇರ್ಪಡಿಸಿದರು. ನಂತರ ಮುಂಬೈ ದಾಳಿಗೆ ತತ್ತರಿಸಿದ ವಿದರ್ಭ ತಂಡ 20 ರನ್‌ಗಳ ಅಂತರದಲ್ಲಿ ಅಂತಿಮ ಐದು ವಿಕೆಟ್ ಕೈಚೆಲ್ಲಿತು. ತನುಷ್ ಕೋಟ್ಯಾನ್ ಹಾಗೂ ಶಮ್ಸ್ ಮುಲಾನಿ ಬಾಲಗೊಂಚಿಗಳಿಗೆ ಸಂಪೂರ್ಣ ಕಡಿವಾಣ ಹೇರಿದರು. ಇದರೊಂದಿಗೆ ಭೋಜನಾ ವಿರಾಮಕ್ಕೆ ವಿದರ್ಭ ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿತು.