ಸಿನ್ನರ್​ಗೆ ಒಲಿದ ಸತತ 2ನೇ ಆಸ್ಟ್ರೆಲಿಯನ್​ ಓಪನ್​ ಪ್ರಶಸ್ತಿ; ಜ್ವೆರೇವ್​ಗೆ ನಿರಾಸೆ

web men aus
Published on

ಮೆಲ್ಬೋರ್ನ್​: ವಿಶ್ವ ನಂ. 1 ಇಟಲಿಯ ಜನ್ನಿಕ್​ ಸಿನ್ನರ್​ ವರ್ಷದ ಮೊದಲ ಗ್ರಾಂಡ್​ ಸ್ಲಾಂ ಆಸ್ಟ್ರೆಲಿಯನ್​ ಓಪನ್​ ಟೆನಿಸ್​ ಟೂರ್ನಿಯ ಪುರುಷರ ಸಿಂಗಲ್ಸ್​ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 23 ವರ್ಷದ ಸಿನ್ನರ್​ ಮೆಲ್ಬೋರ್ನ್​ನಲ್ಲಿ ಸತತ 2ನೇ ಬಾರಿ ಚಾಂಪಿಯನ್​ ಆಗಿ ಹೊರಹೊಮ್ಮಿದ್ದು, ವೃತ್ತೀಜಿವನದ 3ನೇ ಗ್ರಾಂಡ್​ ಸ್ಲಾಂ ಒಲಿಸಿಕೊಂಡಿದ್ದಾರೆ.

ರಾಡ್​ ಲೆವರ್​ ಅರೇನಾದಲ್ಲಿ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಸಿನ್ನರ್​ 6-3, 7-6 (7-4), 6-3 ನೇರಸೆಟ್​ಗಳಿಂದ 2ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್​ ಜ್ವೆರೇವ್​ ಎದುರು ಗೆಲುವು ಸಾಧಿಸಿದರು. ಇದರೊಂದಿಗೆ ಸಿನ್ನರ್​ ಸತತ 2ನೇ ಗ್ರಾಂಡ್​ ಸ್ಲಾಂ ಗೆದ್ದಂತಾಗಿದೆ. ಅವರು ಕಳೆದ ವರ್ಷಾಂತ್ಯದಲ್ಲಿ ಯುಎಸ್​ ಓಪನ್​ ಕೂಡ ಗೆದ್ದಿದ್ದರು. ಸಿನ್ನರ್​ ಈಗ ಹಾರ್ಡ್​ಕೋರ್ಟ್​ ಗ್ರಾಂಡ್​ ಸ್ಲಾಂನಲ್ಲಿ ಸತತ 21 ಪಂದ್ಯ ಗೆದ್ದಂತಾಗಿದೆ. ಕಳೆದ 5 ಗ್ರಾಂಡ್​ ಸ್ಲಾಂಗಳಲ್ಲಿ ಸಿನ್ನರ್​ 3ರಲ್ಲಿ ಗೆದ್ದ ಸಾಧನೆಯನ್ನೂ ಮಾಡಿದ್ದಾರೆ.

ವಿಶ್ವದ ಅಗ್ರ ಇಬ್ಬರು ಶ್ರೇಯಾಂಕಿತ ಆಟಗಾರರ ನಡುವಿನ ಕಾದಾಟವನ್ನು ಸಿನ್ನರ್​ ಎರಡು ಗಂಟೆ 42 ನಿಮಿಷಗಳಲ್ಲಿ ಏಕಪಯವಾಗಿ ಒಲಿಸಿಕೊಂಡರು. 2ನೇ ಸೆಟ್​ನಲ್ಲಿ ಟೈಬ್ರೇಕರ್​ವರೆಗಿನ ಹೋರಾಟವನ್ನು ಬಿಟ್ಟರೆ ಸಿನ್ನರ್​ಗೆ 27 ವರ್ಷದ ಜ್ವೆರೇವ್​ರಿಂದ ಹೆಚ್ಚಿನ ಸವಾಲು ಎದುರಾಗಲಿಲ್ಲ. ಸಿನ್ನರ್​ ಒಂದೂ ಬ್ರೇಕ್​ ಪಾಯಿಂಟ್​ ಬಿಟ್ಟುಕೊಡದೆ ಕಳೆದ ವರ್ಷ ಗೆದ್ದಿದ್ದ ಪ್ರಶಸ್ತಿ ಉಳಿಸಿಕೊಂಡರು.

ಜ್ವೆರೇವ್​ 3ನೇ ಬಾರಿ ಫೈನಲ್​ನಲ್ಲಿ ಎಡವಿ ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿಯಿಂದ ವಂಚಿತರಾದರು. ಈ ಮುನ್ನ 2020ರ ಯುಎಸ್​ ಓಪನ್​ ಮತ್ತು 2024ರ ಫ್ರೆಂಚ್​ ಓಪನ್ ಫೈನಲ್​ನಲ್ಲೂ ಎಡವಿದ್ದರು. ಜ್ವೆರೇವ್​ ಗೆದ್ದಿದ್ದರೆ, ಗ್ರಾಂಡ್​ ಸ್ಲಾಂ ಗೆದ್ದ 5ನೇ ಜರ್ಮನಿ ಆಟಗಾರ ಎನಿಸುತ್ತಿದ್ದರು. ಸೋಲಿನ ನಂತರ ಜ್ವೆರೇವ್​ ಕಣ್ಣೀರಿಟ್ಟಾಗ ಸಿನ್ನರ್​ ಬಳಿಗೆ ತೆರಳಿ ಸಮಾಧಾನ ಮಾಡಿದರು.

6.3 ಅಡಿ ಎತ್ತರದ ಸಿನ್ನರ್​ ಕಳೆದ 32 ವರ್ಷಗಳಲ್ಲಿ ಮೆಲ್ಬೊರ್ನ್​ ಪಾರ್ಕ್​ನಲ್ಲಿ ಸತತ 2 ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯರೆನಿಸಿದರು. 1992-93ರಲ್ಲಿ ಕೊನೆಯದಾಗಿ ಜಿಮ್​ ಕೋರಿಯರ್​ ಈ ಸಾಧನೆ ಮಾಡಿದ್ದರು. ಕಳೆದ ವರ್ಷ ಜೂನ್​ನಿಂದ ವಿಶ್ವ ನಂ. 1 ಪಟ್ಟದಲ್ಲಿರುವ ಸಿನ್ನರ್​, ಇದೀಗ ಅದನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.

ಹಾಲಿ ಟೆನಿಸ್​ ಆಟಗಾರರ ಪೈಕಿ ಸಿನ್ನರ್​ 3ನೇ ಗರಿಷ್ಠ ಗ್ರಾಂಡ್​ ಸ್ಲಾಂ ವಿಜೇತರಾಗಿದ್ದಾರೆ. ಜೋಕೊವಿಕ್​ (24) ಮತ್ತು ಕಾಲೋರ್ಸ್​ ಅಲ್ಕರಾಜ್​ (4) ಮೊದಲ 2 ಸ್ಥಾನದಲ್ಲಿದ್ದಾರೆ.

*ಮುಂದಿನ ಗ್ರಾಂಡ್​ ಸ್ಲಾಂ

ಫ್ರೆಂಚ್​ ಓಪನ್​, ಪ್ಯಾರಿಸ್​

ಯಾವಾಗ: ಮೇ 25-ಜೂನ್​ 8

*19: ಚಾಂಪಿಯನ್​ ಜನ್ನಿಕ್​ ಸಿನ್ನರ್​ ಟ್ರೋಫಿಯೊಂದಿಗೆ 19.04 ಕೋಟಿ ರೂ. ನಗದು ಬಹುಮಾನ ಗೆದ್ದುಕೊಂಡರೆ, ರನ್ನರ್​ಅಪ್​ ಜ್ವೆರೇವ್​ 10.34 ಕೋಟಿ ರೂ. ಗಳಿಸಿದರು.

*1: ಸಿನ್ನರ್​ 3 ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆದ್ದ ಮೊದಲ ಇಟಲಿ ಆಟಗಾರರಾಗಿದ್ದಾರೆ. ನಿಕೋಲ ಪೈಟ್ರಂಗೆಲಿ (1959, 1960ರ ಫ್ರೆಂಚ್​ ಓಪನ್​) 2 ಗ್ರಾಂಡ್​ ಸ್ಲಾಂ ಗೆದ್ದಿದ್ದು ಹಿಂದಿನ ಗರಿಷ್ಠ.

ನಡಾಲ್​ ಸಾಧನೆ ಸಮ

ಜನ್ನಿಕ್​ ಸಿನ್ನರ್​ ಕಳೆದ 20 ವರ್ಷಗಳಲ್ಲಿ ಮೊದಲ ಪ್ರಶಸ್ತಿ ಗೆದ್ದ ಗ್ರಾಂಡ್​ ಸ್ಲಾಂನಲ್ಲೇ ಮರುವರ್ಷವೂ ಪ್ರಶಸ್ತಿ ಉಳಿಸಿಕೊಂಡ ಮೊದಲ ಸಾಧಕರಾಗಿದ್ದಾರೆ. ಈ ಮುನ್ನ ಸ್ಪೇನ್​ ದಿಗ್ಗಜ ರಾಫೆಲ್​ ನಡಾಲ್​ 2005 ಮತ್ತು 2006ರ ಫ್ರೆಂಚ್​ ಓಪನ್​ನಲ್ಲಿ ಈ ಸಾಧನೆ ಮಾಡಿದ್ದರು.

8: ಸಿನ್ನರ್​ ವೃತ್ತೀಜಿವನದ ಮೊದಲ ಮೂರೂ ಗ್ರಾಂಡ್​ ಸ್ಲಾಂ ಫೈನಲ್​ಗಳನ್ನೂ ಗೆದ್ದ ವಿಶ್ವದ 8ನೇ ಆಟಗಾರರಾಗಿದ್ದಾರೆ. ಜಿಮ್ಮಿ ಕಾನರ್ಸ್​, ಬೋರ್ನ್​ ಬೋರ್ಗ್​, ಸ್ಟೀನ್​ ಎಡ್​ರ್ಬಗ್​, ಗುಸ್ಟಾವೊ ಕುರ್ಟನ್​, ರೋಜರ್​ ಫೆಡರರ್​, ಸ್ಟಾನ್​ ವಾವ್ರಿಂಕಾ ಮತ್ತು ಕಾಲೋರ್ಸ್​ ಅಲ್ಕರಾಜ್​ ಹಿಂದಿನ ಸಾಧಕರು.

*ಸಿನ್ನರ್​ ಈಗ ವಿಶ್ವದ ಅತ್ಯುತ್ತಮ ಆಟಗಾರರಾಗಿದ್ದಾರೆ. ನಾನಿಂದು ಅವರಿಗೆ ಉತ್ತಮ ಸ್ಪರ್ಧೆಯನ್ನು ನೀಡಲಷ್ಟೇ ಪ್ರಯತ್ನಿಸಿದೆ. ಆದರೆ ಅದು ನನ್ನಿಂದ ಸಾಧ್ಯವಾಗಲಿಲ್ಲ.

| ಅಲೆಕ್ಸಾಂಡರ್​ ಜ್ವೆರೇವ್​

*ನನ್ನ ಈ ಗೆಲುವಿನಲ್ಲಿ ಕೋಚ್​ ಡರೇನ್​ ಕಾಹಿಲ್​ ಕೊಡುಗೆ ಮಹತ್ವದ್ದಾಗಿದೆ. ನಾನು ಗೆದ್ದ ಗ್ರಾಂಡ್​ ಸ್ಲಾಂಗಳಲ್ಲಿ ಇದು ಅತ್ಯಂತ ವಿಶೇಷವಾದುದು.

| ಜನ್ನಿಕ್​ ಸಿನ್ನರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net