

ಬೆಂಗಳೂರು: ಯುವರಾಜ್ ಸಿಂಗ್ ಭಾರತ ತಂಡ ಕಂಡ ಸರ್ವ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರು. ಭಾರತ ತಂಡ 2007ರ ಚೊಚ್ಚಲ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಯುವರಾಜ್ ಸಿಂಗ್. ದಿಗ್ಗಜ ಆಲ್ರೌಂಡರ್ ಯುವರಾಜ್ ಸಿಂಗ್ ಕಳೆದ ವರ್ಷವಷ್ಟೇ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ತಾನು ನಿರೀಕ್ಷಿಸಿದಂತೆ ವಿದಾಯ ಸಿಗಲಿಲ್ಲವೆಂಬ ಬೇಸರ ಯುವಿಗೆ ಕಾಡುತ್ತಿದೆ. ಇದನ್ನೂ ಅದೆಷ್ಟೋ ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಕೂಡ. ಆಯ್ಕೆ ಸಮಿತಿ 2019ರ ವಿಶ್ವಕಪ್ ಟೂರ್ನಿಗೆ ತಂಡ ಕಟ್ಟುವ ದೃಷ್ಟಿಯಿಂದ ನಿನ್ನ ಆಯ್ಕೆ ಪರಿಗಣಿಸುವುದು ಕಷ್ಟ ಎಂದು ಧೋನಿ 2017ರಲ್ಲೇ ಯುವಿಗೆ ಹೇಳಿದ್ದರಂತೆ. ಇದೀಗ ಸ್ವತಃ ಯುವರಾಜ್ ಸಿಂಗ್ ಅವರೇ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಕಿಟ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನ
ಕ್ಯಾನ್ಸರ್ನಿಂದ ಚೇತರಿಸಿಕೊಂಡ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪುನರಾಗಮನಕ್ಕೆ ಸಾಕಷ್ಟು ಬೆವರು ಹರಿಸಿದ ಯುವಿ, 2019ರ ಏಕದಿನ ವಿಶ್ವಕಪ್ ಬಳಿಕ ನಿವೃತ್ತಿ ಹೇಳುವ ಲೆಕ್ಕಾಚಾರದಲ್ಲಿದ್ದರು. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಬೆಂಬಲವೂ ಯುವರಾಜ್ಗಿತ್ತು. ಆದರೆ, ಆಯ್ಕೆ ಸಮಿತಿ ಮಾತ್ರ ಯುವಿ ಕನಸಿಗೆ ಅವಕಾಶ ನೀಡಲಿಲ್ಲ. 2017ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸವೇ ಯುವಿ ಪಾಲಿಗೆ ಕಡೇ ಅಂತಾರಾಷ್ಟ್ರೀಯ ಸರಣಿಯಾಯಿತು. ಆ ಬಳಿಕ ಒಮ್ಮೆ ಧೋನಿ, ವಿಶ್ವಕಪ್ಗೆ ತಂಡಕಟ್ಟಲು ಆಯ್ಕೆ ಸಮಿತಿ ಯೋಚಿಸಿದಂತಿದೆ. ಹೀಗಾಗಿ ನಿನ್ನ ಆಯ್ಕೆ ಕಷ್ಟ ಎಂದು ಧೋನಿ, ಯವಿಗೆ ಹೇಳಿದ್ದರಂತೆ. ನನ್ನ ವೃತ್ತಿ ಜೀವನದ ಬಗ್ಗೆ ಸರಿಯಾಗಿ ಉತ್ತರನೀಡಿದವರೇ ಧೋನಿ ಎಂದು ಯುವಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸ್ಟಾರ್ ಷಟ್ಲರ್ ಪಿವಿ ಸಿಂಧು ಈಗ ಪೇಂಟರ್!
2011ರ ಏಕದಿನ ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ 9 ಪಂದ್ಯಗಳಿಂದ 362 ರನ್ ಸಿಡಿಸಿ, 15 ವಿಕೆಟ್ ಕಬಳಿಸಿದ್ದರು. ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ ಎನಿಸಿಕೊಂಡಿದ್ದರು ಪಂಜಾಬ್ನ ಯುವರಾಜ್. ಬಳಿಕ ಹಲವು ಬಾರಿಗೆ ಧೋನಿ ಕೂಡ ನನ್ನ ಬಳಿಕ ವಿಶ್ವಕಪ್ ಗೆಲುವಿನಲ್ಲಿ ನೀನೆ ಪ್ರಮುಖ ಎಂದು ಹೇಳಿದ್ದುಂಟು. ಕ್ಯಾನ್ಸರ್ನಿಂದ ಚೇತರಿಸಿಕೊಂಡು ವಾಪಸ್ ಆದ ಬಳಿಕ ಎಲ್ಲವೂ ಬದಲಾಗಿತ್ತು ಎಂದು ಯುವರಾಜ್ ಹೇಳಿದ್ದಾರೆ. ಭವಿಷ್ಯದಲ್ಲಿ ಯುವ ಆಟಗಾರರಿಗೆ ತರಬೇತಿ ನೀಡುವುದಾಗಿ ಹೇಳಿಕೊಂಡಿದ್ದಾರೆ.