ಡೈಮಂಡ್​ ಲೀಗ್​ನಲ್ಲಿ ನೀರಜ್​ ಚೋಪ್ರಾಗೆ ರಜತ ಹಾರ; ಕೇವಲ 2 ಸೆಂಟಿಮೀಟರ್​ನಿಂದ ತಪ್ಪಿದ ಚಿನ್ನ!

web neeraj
Published on

ದೋಹಾ: ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ರಜತ ಪದಕ ಗೆಲುವಿನೊಂದಿಗೆ ಮರಳಿ ಕಣಕ್ಕಿಳಿದಿದ್ದಾರೆ. ಡೈಮಂಡ್​ ಲೀಗ್​ನ ಮೊದಲ ಚರಣದಲ್ಲಿ ಗರಿಷ್ಠ 88.36 ಮೀಟರ್​ ದೂರ ಎಸೆದ ನೀರಜ್​, ಕೇವಲ 2 ಸೆಂಟಿಮೀಟರ್​ನಿಂದ ಅಗ್ರಸ್ಥಾನದಿಂದ ವಂಚಿತರಾದರು. ಜೆಕ್​ ಗಣರಾಜ್ಯದ ಜೇಕಬ್​ ವಡ್ಲೆಜ್​ (88.38 ಮೀ) ಸ್ವರ್ಣ ಪದಕ ಜಯಿಸಿದರು. ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಪೂರ್ವಭಾವಿಯಾಗಿ 26 ವರ್ಷದ ನೀರಜ್​ ಹಾಲಿ ವರ್ಷದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ.

ಶುಕ್ರವಾರ ರಾತ್ರಿ ದೋಹಾದಲ್ಲಿ ನಡೆದ ಸ್ಪರ್ಧೆಯಲ್ಲಿ ನೀರಜ್​ ಮೊದಲ ಯತ್ನದಲ್ಲಿ ಫೌಲ್​ ಮಾಡಿದರು. ನಂತರ 2ನೇ ಎಸೆತದಲ್ಲಿ 84.93 ಮೀ. ಎಸೆದರೆ, 3ನೇ ಯತ್ನದಲ್ಲಿ ಗರಿಷ್ಠ 86.24 ಮೀ. ಎಸೆದರು. ನಂತರದ 2 ಯತ್ನದಲ್ಲಿ ಇದನ್ನು ಮೀರಿಸಲು ಸಫಲರಾಗಲಿಲ್ಲ. 6ನೇ ಹಾಗೂ ಕೊನೇ ಯತ್ನದಲ್ಲಿ 88.36 ಮೀ. ದೂರ ಎಸೆಯುವ ಮೂಲಕ ಸ್ವರ್ಣ ತಪ್ಪಿದರೂ, 2ನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಸಫಲರಾದರು. ಗ್ರೆನೆಡದ ಆಂಡರ್​ಸನ್​ ಪೀಟರ್ಸ್​ 86.62 ಮೀ. ಎಸೆದು 3ನೇ ಸ್ಥಾನ ಪಡೆದರು. ಕಳೆದ ವರ್ಷ ಅಕ್ಟೋಬರ್​ನಲ್ಲಿ ಹಾಂಗ್​ರೆೌ ಏಷ್ಯನ್​ ಗೇಮ್ಸ್​ನಲ್ಲಿ ನೀರಜ್​ ಕೊನೆಯದಾಗಿ ಸ್ಪರ್ಧಿಸಿದ್ದರು.

ಪ್ಯಾರಿಸ್​ ಒಲಿಂಪಿಕ್ಸ್​ಗೆ ಭರ್ಜರಿ ಸಿದ್ಧತೆ ನಡೆಸಿರುವ ನೀರಜ್​ ಈ ಸಲವೂ 90 ಮೀ. ಗಡಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ. 89.94 ಮೀ. ಅವರ ಗರಿಷ್ಠ ದೂರದ ಎಸೆತವಾಗಿದೆ. ಇನ್ನು ಮೇ 14-15ರಂದು ಅವರು ಭುವನೇಶ್ವರದಲ್ಲಿ ಫೆಡರೇಷನ್​ ಕಪ್​ ಅಥ್ಲೆಟಿಕ್ಸ್​ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಇದು ಕಳೆದ 3 ವರ್ಷಗಳಲ್ಲಿ ಭಾರತದಲ್ಲಿ ಅವರ ಮೊದಲ ಸ್ಪರ್ಧೆ ಆಗಿರಲಿದೆ.

ಕಿಶೋರ್​ಗೆ ನಿರಾಸೆ: ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತೋರ್ವ ಭಾರತೀಯ ಕಿಶೋರ್​ ಜೆನಾ ಗರಿಷ್ಠ 76.31 ಮೀ. ಎಸೆತದೊಂದಿಗೆ 9ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದೇ ಮೊದಲ ಬಾರಿಗೆ ಡೈಮಂಡ್​ ಲೀಗ್​ನಲ್ಲಿ ಸ್ಪರ್ಧಿಸಿದ ಒಡಿಶಾದ ಕಿಶೋರ್​ ಮೊದಲ ಯತ್ನದಲ್ಲಿ 75.72 ಮೀ. ಎಸೆದರೆ, 2ನೇ ಯತ್ನದಲ್ಲಿ ಫೈಲ್​ ಮಾಡಿದರು. 3ನೇ ಯತ್ನದಲ್ಲಿ 76.31 ಮೀ. ಎಸೆದರೂ, ಅಗ್ರ 8ರಿಂದ ಹೊರಬಿದ್ದ ಕಾರಣ ಕೊನೇ 3 ಎಸೆತ ಎಸೆಯುವ ಅವಕಾಶ ತಪ್ಪಿಸಿಕೊಂಡರು.

ನೀರಜ್​ ಥ್ರೋ

1. ಫೌಲ್​

2. 84.93 ಮೀ.

3. 86.24 ಮೀ.

4. 86.18 ಮೀ.

5. 82.28 ಮೀ.

6. 86.36 ಮೀ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net