

ಮುಂಬೈ: ಭಾರತದ ವಿನೋದ್ ಕುಮಾರ್, ಪುರುಷರ ಡಿಸ್ಕಸ್ ಥ್ರೋ ಎಫ್-52 ವಿಭಾಗದಲ್ಲಿ 19.91 ಮೀಟರ್ ಎಸೆಯುವ ಮೂಲಕ ಏಷ್ಯಾಡ್ ದಾಖಲೆಯೊಂದಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. 41 ವರ್ಷದ ವಿನೋದ್ ಕುಮಾರ್ 6 ಯತ್ನಗಳಲ್ಲೂ ಉತ್ತಮ ನಿರ್ವಹಣೆ ತೋರಲು ಯಶಸ್ವಿಯಾದರು. ಆದರೆ, ಅಂಗವೈಕಲ್ಯ ವಿಂಗಡನೆ ಕುರಿತು ಎದುರಾದ ಪ್ರತಿಭಟನೆಯಿಂದಾಗಿ ಕಂಚಿನ ಪದಕ ಜಯಿಸಿದ ವಿನೋದ್ ಕುಮಾರ್ ಫಲಿತಾಂಶವನ್ನು ಆಯೋಜಕರು ತಡೆ ಹಿಡಿದಿದ್ದಾರೆ. ಪುರುಷರ ಡಿಸ್ಕಸ್ ಥ್ರೋ ಎಫ್-52 ವಿಭಾಗದಲ್ಲಿ ವಿನೋದ್ ಕುಮಾರ್ ಸ್ಪರ್ಧಿಸಿದ್ದರು.
ದುರ್ಬಲಯುತ ಸ್ನಾಯುಶಕ್ತಿ, ಚಲನ ನಿರ್ಬಂಧ ಹಾಗೂ ಅಂಗಗಳ ಕೊರತೆ ಅಥವಾ ಕಾಲಿನ ವ್ಯತ್ಯಾಸ ಹೊಂದಿರುವವರು ಈ ವಿಭಾಗದಲ್ಲಿ ಸ್ಪರ್ಧಿಸಬಹುದು ಎಂದು ಆಗಸ್ಟ್ 22 ರಂದು ಆಯೋಜಕರು ಸೂಚನೆ ನೀಡಿದ್ದರು. ಇದೀಗ ವಿನೋದ್ ವಿಭಾಗದ ವಿಂಗಡನೆ ಕುರಿತು ಪ್ರತಿಭಟನೆ ವ್ಯಕ್ತವಾಗಿದೆ. ‘ವಿನೋದ್ ಕುಮಾರ್ ಫಲಿತಾಂಶಕ್ಕೆ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ನಿಗದಿಯಾಗಿದ್ದ ಪದಕ ಪ್ರದಾನ ಸಮಾರಂಭವನ್ನು ಸೋಮವಾರಕ್ಕೆ ಮುಂದೂಡಲಾಗಿದೆ’ ಎಂದು ಆಯೋಜಕರು ತಿಳಿಸಿದ್ದಾರೆ.
*ಮಾಜಿ ಸೈನಿಕ ವಿನೋದ್ ಕುಮಾರ್
ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿರುವ ವಿನೋದ್ ಕುಮಾರ್, ಲಡಾಕ್ ಪ್ರದೇಶದ ಲೆಹ ಎಂಬದಲ್ಲಿ ಪ್ರತಾಪದಿಂದ ಆಯಾತಪ್ಪಿ ಬಿದ್ದು ಗಾಯಗೊಂಡಿದ್ದರು. ಸೇನೆಗೆ ಸೇರಿದ ಕೇವಲ 7 ತಿಂಗಳಲ್ಲೇ ಈ ದುರ್ಘಟನೆ ನಡೆದಿತ್ತು. ಅದೃಷ್ಟವಶಾತ್ ಬದುಕುಳಿದ ವಿನೋದ್, ಸುಮಾರು 10 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರು. ಹರಿಯಾಣದ ರೋಹ್ಟಕ್‌ನವರಾದ ವಿನೋದ್, ಪ್ರತಿದಿನ ವೀಲ್‌ಚೇರ್‌ನಲ್ಲಿ ಓಡಾಡುತ್ತಿದ್ದರಂತೆ. ಇದನ್ನು ಗಮನಿಸಿದ ಆರ್ಚರಿ ಕೋಚ್‌ವೊಬ್ಬರು ಪ್ಯಾರಾ ಕ್ರೀಡೆಯಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರಂತೆ. ಹೀಗೆ ಸತತ ಪ್ರಯತ್ನದ ಫಲವಾಗಿ ವಿನೋದ್, ಪ್ಯಾರಾಥ್ಲೀಟ್ ಆಗಿ ರೂಪುಗೊಂಡಿದ್ದರು. 2019ರಲ್ಲಿ ವಿಶ್ವ ಪ್ಯಾರಾಥ್ಲೀಟ್ಸ್ ಗ್ರಾೃನ್ ಪ್ರೀಯಲ್ಲಿ ಮೊದಲ ಬಾರಿಗೆ ಪದಕ ಜಯಿಸಿದ್ದರು. ವಿನೋದ್ ಕುಮಾರ್ ಅವರ ತಂದೆಯೂ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದು, 1971ರ ಭಾರತ-ಪಾಕಿಸ್ತಾನ ಕದನದಲ್ಲಿ ಪಾಲ್ಗೊಂಡಿದ್ದರು.