

ದುಬೈ: ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ ಮಾದರಿಗೆ ವಿದಾಯ ಹೇಳಿದ್ದರು. ಈ ಸಲ ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ರೋಹಿತ್, ಕೊಹ್ಲಿ ಏಕದಿನ ಮಾದರಿಯಿಂದಲೂ ನಿವೃತ್ತಿ ಹೊಂದಿ 2027ರ ವಿಶ್ವಕಪ್ಗೆ ತಂಡ ಕಟ್ಟಲು ಅನುವು ಮಾಡಿಕೊಡಲಿದ್ದಾರೆ ಎಂಬ ವರದಿಗಳು ಹರಡಿವೆ. ಆದರೆ ಶನಿವಾರ ಫೈನಲ್ಗೆ ಮುನ್ನ ಸುದ್ದಿಗೋಷ್ಠಿಗೆ ಹಾಜರಾದ ಉಪನಾಯಕ ಶುಭಮಾನ್ ಗಿಲ್, ರೋಹಿತ್-ಕೊಹ್ಲಿ ನಿವೃತ್ತಿ ಸಾಧ್ಯತೆಯನ್ನು ತಳ್ಳಿಹಾಕಿದರು.
"ಡ್ರೆಸ್ಸಿಂಗ್ ರೂಮ್ನಲ್ಲಿ ನಿವೃತ್ತಿ ಬಗ್ಗೆ ಯಾವುದೇ ಮಾತುಕತೆಗಳು ನಡೆದಿಲ್ಲ. ರೋಹಿತ್ ಫೈನಲ್ ಪಂದ್ಯದ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ' ಎಂದು ಗಿಲ್ ಸ್ಪಷ್ಟಪಡಿಸಿದರು.
ರೋಹಿತ್, ಕೊಹ್ಲಿಗೆ 4ನೇ ಐಸಿಸಿ ಟ್ರೋಫಿ ನಿರೀಕ್ಷೆ
ಭಾರತ ಗೆದ್ದರೆ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಗರಿಷ್ಠ 4 ಐಸಿಸಿ ಟ್ರೋಫಿ ಗೆದ್ದ ಭಾರತೀಯ ದಾಖಲೆ ಬರೆಯಲಿದ್ದಾರೆ. ಸದ್ಯ ಇವರಿಬ್ಬರು ತಲಾ 3 ಬಾರಿ ಐಸಿಸಿ ಟ್ರೋಫಿ ಗೆದ್ದ ದಾಖಲೆಯನ್ನು ಎಂಎಸ್ ಧೋನಿ, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಜತೆಗೆ ಹಂಚಿಕೊಂಡಿದ್ದಾರೆ. ರೋಹಿತ್ ಈ ಮುನ್ನ 2007, 2024ರ ಟಿ20 ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರೆ, ಕೊಹ್ಲಿ 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ, 2024ರ ಟಿ20 ವಿಶ್ವಕಪ್ ಗೆದ್ದಿದ್ದಾರೆ.