

ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಮತ್ತು ಪಂಜಾಬ್ನ ಯುವ ಕ್ರಿಕೆಟಿಗ ಶುಭಮಾನ್ ಗಿಲ್ ಇಬ್ಬರೂ ಜತೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ಭರ್ಜರಿ ಟ್ರೋಲ್ಗೆ ಒಳಗಾಗಿದ್ದಾರೆ. ಅವರಿಬ್ಬರು ಪೋಸ್ಟ್ ಮಾಡಿರುವ ಚಿತ್ರಗಳಿಗೆ ಒಂದೇ ರೀತಿಯ ಕ್ಯಾಪ್ಶನ್ ನೀಡಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದಾಗಿ, ಇವರಿಬ್ಬರ ನಡುವೆ ಪ್ರೀತಿ ಇದೆ ಎಂದು ಕಳೆದ ಕೆಲ ಸಮಯಗಳಿಂದ ಹರಿದಾಡುತ್ತಿರುವ ಸುದ್ದಿಗಳು ಮತ್ತೆ ಚಾಲ್ತಿಗೂ ಬಂದಿವೆ.
ಬುಧವಾರದ ಪೋಸ್ಟ್ ಒಂದರಲ್ಲಿ 20 ವರ್ಷದ ಶುಭಮಾನ್ ಗಿಲ್, 'ಐ ಸ್ಪೈ' ಅಂದರೆ 'ನಾನು ಬೇಹುಗಾರಿಕೆ ಮಾಡುತ್ತೇನೆ' ಎಂದು ತಮ್ಮ ಚಿತ್ರಕ್ಕೆ ಕ್ಯಾಪ್ಶನ್ ನೀಡಿದ್ದರು. ಮತ್ತೊಂದೆಡೆ ಸಾರಾ ತೆಂಡುಲ್ಕರ್ ಕೂಡ ಬುಧವಾರವೇ ಪೋಸ್ಟ್ ಮಾಡಿರುವ ಚಿತ್ರಕ್ಕೆ ನಿಖರವಾಗಿ ಇದೇ ಕ್ಯಾಪ್ಶನ್ ನೀಡಿದ್ದಾರೆ. ಇದನ್ನು ಕಂಡ ನೆಟ್ಟಿಗರು, ನಾವು ಕೂಡ ಬೇಹುಗಾರಿಕೆ ಮಾಡುತ್ತಿದ್ದೇವೆ ಎಂದು ಅವರಿಬ್ಬರನ್ನು ಭರ್ಜರಿಯಾಗಿ ಟ್ರೋಲ್ ಮಾಡಿದ್ದಾರೆ.
ಕೋಲ್ಕತ ನೈಟ್ರೈಡರ್ಸ್ ಬ್ಯಾಟ್ಸ್ಮನ್ ಶುಭಮಾನ್ ಗಿಲ್ ಮತ್ತು ಸಾರಾ ತೆಂಡುಲ್ಕರ್ ನಡುವೆ ಸಂಬಂಧ ಕಲ್ಪಿಸಿದ ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲಲ್ಲ. ಅವರಿಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಲವಾರು ಸಮಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಅದಕ್ಕೆ ಪುಷ್ಠಿ ನೀಡುವ ಅಂಶಗಳಿಗೆ ಕೊರತೆ ಇತ್ತು. ಹೀಗಾಗಿ ಈ ಬಾರಿ ಅವರಿಬ್ಬರು ಒಂದೇ ರೀತಿಯ ಕ್ಯಾಪ್ಶನ್ ನೀಡಿರುವುದು ನೆಟ್ಟಿಗರ ಅನುಮಾನವನ್ನು ಇನ್ನಷ್ಟು ಬಲಪಡಿಸಿದೆ.
ಕಳೆದ ವರ್ಷ ಭಾರತ ಪರ 2 ಏಕದಿನ ಪಂದ್ಯಗಳನ್ನಷ್ಟೇ ಆಡುವ ಅವಕಾಶ ಪಡೆದಿದ್ದ ಶುಭಮಾನ್ ಗಿಲ್, ಸ್ಟಾರ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರಷ್ಟೇ ಪ್ರತಿಭಾನ್ವಿತರು ಎಂದು ಹೇಳಲಾಗುತ್ತದೆ. 2018ರ 19 ವಯೋಮಿತಿ ವಿಶ್ವಕಪ್ ವಿಜೇತ ತಂಡದ ಉಪನಾಯಕರಾಗಿರುವ ಶುಭಮಾನ್ ಗಿಲ್, 19ನೇ ವಯಸ್ಸಿನಲ್ಲಿ ಹೊಂದಿರುವ ಸಾಮರ್ಥ್ಯದ ಶೇ. 10ರಷ್ಟನ್ನೂ ನಾನು ಆ ವಯಸ್ಸಿನಲ್ಲಿ ಹೊಂದಿರಲಿಲ್ಲ ಎಂದು ವಿರಾಟ್ ಕೊಹ್ಲಿ ಹಿಂದೊಮ್ಮೆ ಹೇಳಿಕೊಂಡಿದ್ದರು.