ಬ್ಯಾಟಿಂಗ್ ಮಾಡುವ ಮಜವೇ ಕಳೆದುಕೊಂಡಿದ್ದೆ; ಚೊಚ್ಚಲ ದ್ವಿಶತಕ ಬೆನ್ನಲ್ಲೇ ಕ್ಯಾಪ್ಟನ್ ಗಿಲ್ ಹೇಳಿಕೆ ವೈರಲ್ | Shubman Gill

ವಿಜಯವಾಣಿ - 2025-07-04T102618.605
Published on

Shubman Gill: ನಿನ್ನೆ (ಜು.03) ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಚೊಚ್ಚಲ ದ್ವಿಶತಕ ಬಾರಿಸಿದರು. ಈ ಮೂಲಕ ಹಲವು ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾದರು. ಭಾರತ ತಂಡದ ನಾಯಕನಾಗಿಯೂ, ಅತ್ಯುತ್ತಮ ಬ್ಯಾಟರ್​ ಆಗಿಯೂ ಕಾಣಿಸಿಕೊಂಡ ಗಿಲ್, ಅದ್ಭುತ ಇನ್ನಿಂಗ್ಸ್ ತೋರಿದ್ದು ಅಪಾರ ಸಂಖ್ಯೆಯ ಕ್ರಿಕೆಟ್ ಪ್ರೇಮಿಗಳ ಸಂತಸಕ್ಕೆ ಕಾರಣವಾಯಿತು.

ಚೊಚ್ಚಲ ದ್ವಿಶತಕ, ಹಲವು ದಾಖಲೆಗಳು ಮುಡಿಗೆ

ಟೆಸ್ಟ್‌ ಫಾರ್ಮೆಟ್​ನಲ್ಲಿ ಗಿಲ್​ ದಾಖಲಿಸಿದ ಮೊದಲ ದ್ವಿಶತಕ ಇದಾಗಿದ್ದು, ಕೇವಲ 311 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಯುವ ನಾಯಕನಿಗೆ ಮೆಚ್ಚುಗೆ, ಪ್ರಶಂಸೆಗಳ ಮಹಾಪೂರವೇ ಹರಿದುಬಂದಿತು. ಎರಡನೇ ಟೆಸ್ಟ್​ನ ಎರಡನೇ ದಿನದಾಟದ ಬಳಿಕ ಮಾತನಾಡಿದ ಶುಭಮನ್ ಗಿಲ್​, "ಟೆಸ್ಟ್​ ಫಾರ್ಮೆಟ್​ನಲ್ಲಿ ದೀರ್ಘ ಕಾಲ ಬ್ಯಾಟ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಟೆಸ್ಟ್​ ಶುರುವಿಗೂ ಮುನ್ನವೇ ಆಟದ ಬಗ್ಗೆ ನಾನು ಹೆಚ್ಚು ಗಮನಹರಿಸಿದ್ದೆ. ಐಪಿಎಲ್​ ಮುಗಿಯುವ ಹಂತಕ್ಕೆ ಬಂದಾಗಲೇ ಟೆಸ್ಟ್​ ಇನ್ನಿಂಗ್ಸ್​ ಕುರಿತು ಕೆಲಸ ಮಾಡಿದ್ದೆ. ಕಡೆಗೂ ಅದು ಫಲಿಸಿತು" ಎಂದರು.

"ಈ ಹಿಂದೆ, ನಾನು ಟೆಸ್ಟ್ ಪಂದ್ಯಗಳಲ್ಲಿ 30-34-40 ರನ್​ ಬಾರಿಸಲಷ್ಟೇ ಸೀಮಿತವಾಗಿದ್ದೆ. ಒಂದು ಹಂತದಲ್ಲಿ, ನಾನು ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದ್ದೆ. ಹೀಗಾಗಿಯೇ, ನಾನು ಇನ್ನಿಂಗ್ಸ್​ನಲ್ಲಿ ನಿಂತು ಆಡುವ ಬಗ್ಗೆ ಹೆಚ್ಚು ಫೋಕಸ್​ ಮಾಡಿದೆ. ಕೆಲವೊಮ್ಮೆ, ನೀವು ಸುಲಭವಾಗಿ ರನ್ ಗಳಿಸದಿದ್ದಾಗ, ನಿಮ್ಮ ಬ್ಯಾಟಿಂಗ್ ಅನ್ನು ಆನಂದಿಸುವುದನ್ನೇ ನಿಲ್ಲಿಸುತ್ತೀರಿ. ಕೇವಲ ರನ್ ಗಳಿಸುವ ಅಗತ್ಯತೆ ಮೇಲೆ ಮಾತ್ರ ಗಮನಹರಿಸುತ್ತೀರಿ. ನಾನು ಹಾಗೆಯೇ ಮಾಡಿದ್ದೆ. ಆದರೆ, ಈಗ ಅದು ಬದಲಾಗಿದೆ" ಎಂದು ಹೇಳಿದರು.

"ಕಳೆದ ಪಂದ್ಯದಲ್ಲಿ ನಾವು ಫೀಲ್ಡಿಂಗ್​ನಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದೆವು. ಹಲವು ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ನಮಗೆ ತುಂಬಾ ತೊಂದರೆ ಎದುರಾಯಿತು. ಇಲ್ಲದಿದ್ದರೆ, ಪರಿಸ್ಥಿತಿ ಬೇರೆಯೇ ಇರುತ್ತಿತ್ತು" ಎಂದು ಕ್ಯಾಪ್ಟನ್ ಗಿಲ್​ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net