

ಇಂದೋರ್: ಶ್ರೇಯಸ್ ಅಯ್ಯರ್ (105 ರನ್, 90 ಎಸೆತ, 11 ಬೌಂಡರಿ, 3 ಸಿಕ್ಸರ್) ಹಾಗೂ ಆರಂಭಿಕ ಶುಭಮಾನ್ ಗಿಲ್ (104 ರನ್, 97 ಎಸೆತ, 6 ಬೌಂಡರಿ, 4 ಸಿಕ್ಸರ್) ಆಕರ್ಷಕ ಶತಕಗಳ ಬಲದಿಂದ ಮಳೆ ಬಾಧಿತ 2ನೇ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ಎದುರು ಡಕ್ವತ್-ಲೂಯಿಸ್ ನಿಯಮದನ್ವಯ 99 ರನ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಕೆಎಲ್ ರಾಹುಲ್ ಹಂಗಾಮಿ ನಾಯಕತ್ವದ ಭಾರತ ತಂಡ 3 ಪಂದ್ಯಗಳ ಸರಣಿಯನ್ನು, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0ಯಿಂದ ವಶಪಡಿಸಿಕೊಂಡಿದೆ. ಪ್ರಮುಖ ಆಟಗಾರರ ಗೈರಿನ ನಡುವೆಯೂ ಭರ್ಜರಿ ಆಟವಾಡಿದ ಟೀಮ್ ಇಂಡಿಯಾ, ತವರಿನ ವಿಶ್ವಕಪ್‌ವರೆಗೂ ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ ನಂ.1 ಪಟ್ಟ ಭದ್ರಪಡಿಸಿಕೊಂಡಿದೆ.
ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ಶ್ರೇಯಸ್-ಗಿಲ್ ಭರ್ಜರಿ ಜತೆಯಾಟ ಹಾಗೂ ಸೂರ್ಯಕುಮಾರ್ ಯಾದವ್ (72* ರನ್, 37 ಎಸೆತ, 6 ಬೌಂಡರಿ, 6 ಸಿಕ್ಸರ್) ಬಿರುಸಿನ ಆಟದ ನೆರವಿನಿಂದ 5 ವಿಕೆಟ್‌ಗೆ 399 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಆಸೀಸ್, 9 ಓವರ್‌ಗಳಲ್ಲಿ 2 ವಿಕೆಟ್‌ಗೆ 56 ರನ್‌ಗಳಿಸಿದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದರಿಂದಾಗಿ ಒಂದು ಗಂಟೆ ಕಾಲ ಆಟ ಸ್ಥಗಿತಗೊಂಡಿತು. ಬಳಿಕ ಡಕ್ವತ್-ಲೂಯಿಸ್ ನಿಯಮದನ್ವಯ ಆಸೀಸ್‌ಗೆ 33 ಓವರ್‌ಗಳಲ್ಲಿ 317 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಪ್ರತಿಯಾಗಿ ಆಸ್ಟ್ರೇಲಿಯಾ 28.2 ಓವರ್‌ಗಳಲ್ಲಿ 217 ರನ್‌ಗಳಿಗೆ ಸರ್ವಪತನ ಕಂಡು ಶರಣಾಯಿತು.
*7: ಶುಭಮಾನ್ ಗಿಲ್ ಒಂದೇ ವರ್ಷದಲ್ಲಿ 5 ಶತಕ ಸಿಡಿಸಿದ 7ನೇ ಭಾರತೀಯ ಬ್ಯಾಟರ್ ಎನಿಸಿದರು. ತೆಂಡುಲ್ಕರ್ (1996, 1998), ದ್ರಾವಿಡ್ (1999), ಗಂಗೂಲಿ (2000), ಕೊಹ್ಲಿ (2012, 2017,2018, 2019), ಶಿಖರ್ ಧವನ್ (2013), ರೋಹಿತ್ ಶರ್ಮ (2017, 2018, 2019) ಹಿಂದಿನ ಸಾಧಕರು.
*24: ಸೂರ್ಯಕುಮಾರ್ (24) ಆಸೀಸ್ ಎದುರು ಏಕದಿನದಲ್ಲಿ ವೇಗವಾಗಿ ಅರ್ಧಶತಕಗಳಿಸಿದ ವಿರಾಟ್ ಕೊಹ್ಲಿ (27) ದಾಖಲೆ ಮುರಿದರು. ಒಟ್ಟಾರೆ ಭಾರತದ ಪರ 6ನೇ ವೇಗದ ಅರ್ಧಶತಕ ಬಾರಿಸಿದರು.
*399: ಆಸೀಸ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಗರಿಷ್ಠ ಮೊತ್ತ ಇದಾಗಿದೆ. 389 ಹಿಂದಿನ ದೊಡ್ಡ ಮೊತ್ತವಾಗಿತ್ತು.
1: ಟೀಮ್ ಇಂಡಿಯಾ (3,007) ಏಕದಿನ ಕ್ರಿಕೆಟ್‌ನಲ್ಲಿ 3 ಸಾವಿರ ಸಿಕ್ಸರ್ ಸಿಡಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ವೆಸ್ಟ್ ಇಂಡೀಸ್ (2,953) 2ನೇ ಸ್ಥಾನದಲ್ಲಿದೆ.
5: ಶುಭಮಾನ್ ಗಿಲ್ 2023ರಲ್ಲಿ ಸಿಡಿಸಿದ ಏಕದಿನ ಶತಕ. ಒಟ್ಟಾರೆ 6ನೇ ಶತಕ.
3: ಏಕದಿನ ಕ್ರಿಕೆಟ್‌ನಲ್ಲಿ ಸತತ 4 ಸಿಕ್ಸರ್ ಸಿಡಿಸಿದ ಮೂರನೇ ಭಾರತೀಯ ಸೂರ್ಯಕುಮಾರ್. ಜಹೀರ್ ಖಾನ್, ರೋಹಿತ್ ಶರ್ಮ ಮೊದಲಿಬ್ಬರು.