

Shubman Gill: ಜು.23ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ಗೆ ಟೀಮ್ ಇಂಡಿಯಾ ಸನ್ನದ್ಧಗೊಂಡಿದ್ದು, ಪಂದ್ಯ ಗೆಲ್ಲಲು ಎದುರುನೋಡುತ್ತಿದೆ. ಕ್ಯಾಪ್ಟನ್ ಶುಭಮನ್ ಗಿಲ್ ಪಡೆಗೆ ಇದು ನಿರ್ಣಾಯಕ ಪಂದ್ಯವಾಗಿದ್ದು, ಗೆಲ್ಲುವ ಅನಿರ್ವಾಯ ಎದುರಾಗಿದೆ. ಅಕಸ್ಮಾತ್ ಸೋತರೆ, ಸರಣಿಯನ್ನು ಇಂಗ್ಲೆಂಡ್ ಗೆದ್ದು ಬೀಗಲಿದೆ.
ಒಂದೆಡೆ ನಾಲ್ಕನೇ ಟೆಸ್ಟ್ ಗೆಲ್ಲುವ ತವಕದಲ್ಲಿ ಭಾರತವಿದ್ದರೆ, ಮತ್ತೊಂದೆಡೆ ಶುಭಮನ್ ಗಿಲ್ ಐತಿಹಾಸಿಕ ದಾಖಲೆ ನಿರ್ಮಿಸುವತ್ತ ದಾಪುಗಾಲಿಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯಾದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಲಿದ್ದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮದೇ ಹೊಸ ದಾಖಲೆ ಸೃಷ್ಟಿಸಲಿದ್ದಾರೆ.
ಈ ದಾಖಲೆಯು ಪ್ರಸ್ತುತ ಪಾಕಿಸ್ತಾನಿ ಕ್ರಿಕೆಟ್ ದಿಗ್ಗಜ ಮೊಹಮ್ಮದ್ ಯೂಸುಫ್ ಅವರ ಹೆಸರಿನಲ್ಲಿದೆ. 2006ರ ಇಂಗ್ಲೆಂಡ್ ಪ್ರವಾಸದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯೂಸುಫ್, 90.14ರ ಸರಾಸರಿಯಲ್ಲಿ 631 ರನ್ ಗಳಿಸಿದ್ದಾರೆ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 202. ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ಕೇವಲ 25 ರನ್ ಗಳಿಸಿದರೆ ಸಾಕು ಯೂಸುಫ್ ಅವರ ಸಾರ್ವಕಾಲಿಕ ದಾಖಲೆಯನ್ನು ಗಿಲ್ ಮುರಿಯಲಿದ್ದಾರೆ.
ಗಿಲ್ ಪ್ರಸ್ತುತ ಸರಣಿಯಲ್ಲಿ ಮೂರು ಪಂದ್ಯಗಳನ್ನು ಆಡಿದ್ದು, 101.16ರ ಸರಾಸರಿಯಲ್ಲಿ 607 ರನ್ ಗಳಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದ್ದ ಶುಭಮನ್, ನಂತರ ಬರ್ಮಿಂಗ್‌ಹ್ಯಾಮ್ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕದೊಂದಿಗೆ ಮಿಂಚಿದರು. ಇಲ್ಲಿ ಅವರ ಅತ್ಯಧಿಕ ಸ್ಕೋರ್ 269.
ಮ್ಯಾಂಚೆಸ್ಟರ್ ಟೆಸ್ಟ್ ರೂಪದಲ್ಲಿ ಗಿಲ್ ಕಠಿಣ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಭಾರತ ಪ್ರಸ್ತುತ 1-2 ಅಂತರದಲ್ಲಿ ಮುಂದುವರಿದಿದೆ. ಮೊದಲ ಟೆಸ್ಟ್‌ನಲ್ಲಿ ಸೋತ ಬಳಿಕ, ಟೀಮ್ ಇಂಡಿಯಾ ಎರಡನೇ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿತು. ಆದರೆ, ಲಾರ್ಡ್ಸ್ ಟೆಸ್ಟ್‌ನಲ್ಲಿ ಅನಿರೀಕ್ಷಿತ ಸೋಲನ್ನು ಅನುಭವಿಸಿದ್ದು, ಈಗ ಗೆಲುವಿನ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ ಈ ಪಂದ್ಯ ಗಿಲ್ ನಾಯಕತ್ವದಲ್ಲಿ ಭಾರತ ಗೆಲ್ಲಲೇಬೇಕಿದೆ,(ಏಜೆನ್ಸೀಸ್).