

Asia Cup: ಮುಂಬರುವ ಏಷ್ಯಾ ಕಪ್ಗೆ ಭಾರತ ತಂಡದ ನಾಯಕನಾಗಿ ಶುಭಮಾನ್ ಗಿಲ್ ಆಯ್ಕೆಯಾಗಬಹುದು ಎಂಬ ಚರ್ಚೆಗಳಿಗೆ ಬ್ರೇಕ್ ಬಿದ್ದಿದ್ದು, ಬಿಸಿಸಿಐ ಆಯ್ಕೆ ಸಮಿತಿಯು ಸೂರ್ಯಕುಮಾರ್ ಯಾದವ್ ಅವರನ್ನೇ ನಾಯಕರನ್ನಾಗಿ ಮುಂದುವರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಏಷ್ಯಾ ಕಪ್ಗಾಗಿ ತಂಡವನ್ನು ಆಯ್ಕೆ ಮಾಡಲು ಆಗಸ್ಟ್ 19 ರಂದು ಮುಂಬೈನಲ್ಲಿ ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ಸಭೆಯ ನಂತರ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬೈನಲ್ಲಿ ನಡೆಯುವ ಸಭೆಯಲ್ಲಿ ಹಾಲಿ ಟಿ20ಐ ನಾಯಕ ಸೂರ್ಯಕುಮಾರ್ ಭಾಗವಹಿಸಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನಲ್ಲಿದ್ದಾರೆ, ಹರ್ನಿಯಾ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಿಲ್ ನೀಡಿದ ಅದ್ಭುತ ಪ್ರದರ್ಶನದ ನಂತರ ಅವರೇ ಭಾರತ T20I ತಂಡದ ನಾಯಕನಾಗಿ ನೇಮಕಗೊಳ್ಳುತ್ತಾರೆ ಎಂಬ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ಹಬ್ಬಿದ್ದವು. ಐದು ಪಂದ್ಯಗಳ ಸರಣಿಯಲ್ಲಿ 10 ಇನ್ನಿಂಗ್ಸ್ಗಳಲ್ಲಿ ದಾಖಲೆಯ 754 ರನ್ಗಳನ್ನು ಗಳಿಸುವ ಮೂಲಕ ಯುವ ತಂಡವನ್ನು 2-2 ಮುನ್ನಡೆಸಿದರು.
ಈ ಸರಣಿಯಲ್ಲಿನ ಗಿಲ್ ಪ್ರದರ್ಶನವು ಭಾರತದ ಮುಂದಿನ ಎಲ್ಲಾ ಸ್ವರೂಪದ ನಾಯಕನಾಗಿ ಅವರೇ ಆಯ್ಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸದ್ಯ ಸೂರ್ಯಕುಮಾರ್ ಯಾದವ್ ಮುಂದಿನ ಟೂರ್ನಿಯ ತಯಾರಿಯಲ್ಲಿರುವುದರಿಂದ ನಾಯಕತ್ವವನ್ನು ಉಳಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
ಆಯ್ಕೆದಾರರು ಪ್ರಸ್ತುತ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಜೋಡಿಯನ್ನೇ ಅರಂಭಿಕ ಜೋಡಿಯನ್ನಾಗಿ ಮುಂದುವರೆಸಲು ನಿರ್ಧರಿಸಿದ್ದು, ಏಷ್ಯಾಕಪ್ಗೆ ಟೆಸ್ಟ್ ತಂಡದ ನಾಯಕ ಶುಭಮಾನ್ ಗಿಲ್ ಆಯ್ಕೆಯಾಗುವ ಕುರಿತು ಅನುಮಾನವಿದೆ ಎನ್ನಲಾಗಿದೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಮತ್ತು ಇಂಗ್ಲೆಂಡ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಯಶಸ್ವಿ ಜೈಸ್ವಾಲ್ರನ್ನು ಸಹ ಕೈಬಿಡುವ ಸಾಧ್ಯತೆಯಿದೆ. ಆಯ್ಕೆದಾರರು ಜೈಸ್ವಾಲ್ಗೆ ಟೆಸ್ಟ್ ಕ್ರಿಕೆಟ್ನತ್ತ ಗಮನಹರಿಸುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)