ನಾನು ಕೊನೆಯವರೆಗೂ ಉಳಿದುಕೊಂಡಿದ್ದರೆ...; ಜಿಂಬಾಬ್ವೆ ವಿರುದ್ಧ ಸೋಲಿನ ಕುರಿತು ನಾಯಕ ಶುಭಮನ್​ ಹೇಳಿದ್ದಿಷ್ಟು

Shubman Gill
Published on

ಹರಾರೆ: ಇಲ್ಲಿನ ಹರಾರೆ ಸ್ಪೋರ್ಟ್ಸ್​ ಕ್ಲಬ್​ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಹೀನಾಯ ಸೋಲು ಕಂಡಿದ್ದು, ಮೊದಲ ಪಂದ್ಯದಲ್ಲೇ ಗೆಲುವು ಕಾಣುವ ಮೂಲಕ ಆತಿಥೇಯರು ಮೇಲುಗೈ ಸಾಧಿಸಿದ್ದಾರೆ. ಐಪಿಎಲ್​ನಲ್ಲಿ ಮಿಂಚಿದ್ದ ಯುವ ಆಟಗಾರರು ಮೊದಲ ಪಂದ್ಯದಲ್ಲೇ ವಿಫಲವಾಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಇನ್ನೂ ಈ ಕುರಿತು ಮಾತನಾಡಿರುವ ನಾಯಕ ಶುಭಮನ್​ ಗಿಲ್​ ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಟಾಸ್​ ಗೆದ್ದು ಮೊದಲು ಆತಿಥೇಯರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ ಭಾರತ ತಂಡವು ಎದುರಾಳಿಗಳನ್ನು 20 ಓವರ್​ಗಳಲ್ಲಿ 115 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸುಲಭ ಗುರಿ ಬೆನ್ನತ್ತಿದ್ದ ಟೀಮ್​ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡಿದ ಜಿಂಬಾಬ್ವೆ ಬೌಲರ್​ಗಳು ಪ್ರವಾಸಿ ತಂಡವನ್ನು 19.5 ಓವರ್​ಗಳಲ್ಲಿ 102 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಮೊದಲ ಪಂದ್ಯದಲ್ಲಿ ಸೋಲಿನ ಕುರಿತು ಮಾತನಾಡಿದ ನಾಯಕ ಶುಭಮನ್​ ಗಿಲ್​, ನಮ್ಮ ಬೌಲರ್​ಗಳು ಅದ್ಭುತವಾಗಿ ಬೌಲಿಂಗ್​ ಮಾಡಿದ್ದಾರೆ. ಅದರ ಬಗ್ಗೆ ಎರಡು ಮಾತುಗಳಿಲ್ಲ. ಆದರೆ, ಬ್ಯಾಟಿಂಗ್​ ವಿಚಾರಕ್ಕೆ ಬರುವುದಾದರೆ ನಾವು ಚೆನ್ನಾಗಿ ಆಡಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಎಲ್ಲರೂ ತುಕ್ಕು ಹಿಡಿದಂತೆ ಕಾಣುತ್ತಿದ್ದರು. ನಾವು ಗುರಿಯ ಅರ್ಧಕ್ಕೆ ಬರುವಷ್ಟರಲ್ಲಿ 5 ವಿಕೆಟ್​ಗಳನ್ನು ಕಳೆದುಕೊಂಡಿದ್ದೆವು. ನಾನು ಕೊನೆಯವರೆಗೂ ಔಟಾಗದೆ ಉಳಿದುಕೊಂಡಿದ್ದರೆ ಪಂದ್ಯದ ದಿಕ್ಕು ಬದಲಾಗುತ್ತಿತ್ತು ಎಂಬ ಭಾವನೆ ಇದೆ.

ನಾನು ಔಟಾದ ರೀತಿ ಮತ್ತು ಉಳಿದ ಬ್ಯಾಟರ್​ಗಳು ಔಟಾದ ರೀತಿಯಿಂದ ನನಗೆ ತುಂಬಾ ನಿರಾಸೆಯಾಗಿದೆ. ವಾಷಿಂಗ್ಟನ್ ಸುಂದರ್ ಮೇಲೆ ಭರವಸೆ ಇಟ್ಟುಕೊಂಡಿದ್ದೇವು. ಹೀಗಾಗಿ ಕೊನೆಯವರೆಗೂ ನಿರೀಕ್ಷೆಗಳಿದ್ದವು, ಆದರೆ ನೀವು 115 ರನ್‌ಗಳನ್ನು ಬೆನ್ನಟ್ಟುವಾಗ 10ನೇ ಕ್ರಮಾಂಕದ ಬ್ಯಾಟ್ಸ್‌ಮನ್​ ಮೇಲೆ ಗೆಲುವಿನ ನಿರೀಕ್ಷೆ ಇಟ್ಟರೆ, ಏನೋ ತಪ್ಪಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net