ಕೊಹ್ಲಿ ದಾಖಲೆ ಮುರಿದ ಗಿಲ್​! ಆಂಗ್ಲರ ನಾಡಲ್ಲಿ ಭರ್ಜರಿ 150 ರನ್​ ಸಿಡಿಸಿದ ಟೀಮ್ ಇಂಡಿಯಾ ಕ್ಯಾಪ್ಟನ್ | Shubman Gill

ವಿಜಯವಾಣಿ - 2025-07-03T165250.085
Published on

Shubman Gill: ಎಡ್ಜ್‌ಬಾಸ್ಟನ್‌ನ ಬರ್ಮಿಂಗ್ಹ್ಯಾಮ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟ್ ಮಾಡಿದ ಭಾರತ ಇಂದು ಎರಡನೇ ದಿನದಾಟಕ್ಕೆ ಕಾಲಿಟ್ಟಿದೆ. ಮೊದಲ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು. ನಾಯಕ ಶುಭಮನ್ ಗಿಲ್ ಅಜೇಯ ಶತಕ (114 ರನ್​) ಮತ್ತು ರವೀಂದ್ರ ಜಡೇಜ 41 ರನ್ ಗಳಿಸಿ, ಕ್ರೀಸ್​ಗೆ ಅಂಟಿ ನಿಂತಿದ್ದರು. ಇಂದು ಎರಡನೇ ದಿನದಂದು ಗಿಲ್​ ಭರ್ಜರಿ 150 ರನ್​ ದಾಖಲಿಸುವ ಮೂಲಕ ಕಿಂಗ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ.

ಕಣ್ಣಿಟ್ಟಿದ್ದ ಶುಭಮನ್​ ಗಿಲ್​

ಭಾರತದ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 87, ಕೆ.ಎಲ್. ರಾಹುಲ್ 2, ಕರುಣ್ ನಾಯರ್ 31, ರಿಷಭ್ ಪಂತ್ 25, ಮತ್ತು ನಿತೀಶ್ ಕುಮಾರ್ ರೆಡ್ಡಿ ಕೇವಲ 1 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಇಂಗ್ಲೆಂಡ್ ಬೌಲರ್‌ಗಳಲ್ಲಿ ಕ್ರಿಸ್ ವೋಕ್ಸ್ 2 ವಿಕೆಟ್ ಪಡೆದರೆ, ಬ್ರೈಡನ್ ಕಾರ್ಸೆ, ಬೆನ್ ಸ್ಟೋಕ್ಸ್ ಮತ್ತು ಶೋಯೆಬ್ ಬಶೀರ್ ತಲಾ ಒಂದು ವಿಕೆಟ್ ಪಡೆದು ತಂಡದ ಪರ ಮಿಂಚಿದರು.

ಎರಡನೇ ದಿನದಾಟ ಆರಂಭವಾಗುವ ಮುನ್ನ, ಶುಭಮನ್ ಗಿಲ್ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಬೃಹತ್ ದಾಖಲೆಯತ್ತ ಕಣ್ಣಿಟ್ಟಿದ್ದರು. ಇದು ಕ್ರಿಕೆಟ್​ ಅಭಿಮಾನಿಗಳ ಗಮನ ಸೆಳೆದಿತ್ತು. ಎರಡನೇ ದಿನದಾಟದಲ್ಲಿ ಗಿಲ್ ಕೇವಲ 36 ರನ್ ಗಳಿಸಿದರೆ, ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ 150 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ​ ಪಾತ್ರರಾಗುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಇದನ್ನು ಕಡೆಗೂ ಸಾಬೀತುಪಡಿಸಿದ ಗಿಲ್​, 150 ರನ್​ ಸಿಡಿಸುವ ಮೂಲಕ ಎಡ್ಜ್‌ಬಾಸ್ಟನ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇದುವರೆಗೆ ಇಲ್ಲಿನ ಅಂಗಳದಲ್ಲಿ ಯಾವುದೇ ಭಾರತೀಯ ಆಟಗಾರ 150 ರನ್ ಗಳಿಸಿರಲಿಲ್ಲ ಎಂಬುದೇ ಗಮನಾರ್ಹ.

ಕೊಹ್ಲಿ ಐತಿಹಾಸಿಕ ದಾಖಲೆ ಬ್ರೇಕ್​!

ಇದೇ ಮೈದಾನದಲ್ಲಿ ವಿರಾಟ್ 2018ರಲ್ಲಿ 149 ರನ್ ಗಳಿಸಿದ್ದರು. ಇದು ಎಡ್ಜ್‌ಬಾಸ್ಟನ್‌ನಲ್ಲಿ ಭಾರತಕ್ಕೆ ಇದುವರೆಗಿನ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ವಿರಾಟ್​ರ ದಾಖಲೆಯನ್ನು ಮುರಿಯುವಲ್ಲಿ ಕಡೆಗೂ ಗಿಲ್ ಯಶಸ್ವಿಯಾಗಿದ್ದು, ಅದೂ ನಾಯಕನಾಗಿ ಎಂಬುದು ಹಲವರ ಮೆಚ್ಚುಗೆಗೆ ಕಾರಣವಾಗಿದೆ. ಈ ಹಿಂದೆ ಎಡ್ಜ್‌ಬಾಸ್ಟನ್‌ನಲ್ಲಿ ಸಚಿನ್ ತೆಂಡೂಲ್ಕರ್​ 122 ರನ್​ ಮತ್ತು ಪಂತ್ 146 ರನ್ ಗಳಿಸಿದ್ದಾರೆ. ದಿಗ್ಗಜ ಬ್ಯಾಟರ್​ಗಳ ದಾಖಲೆಯನ್ನು ಹಿಂದಿಕ್ಕಿರುವ ಗಿಲ್​, ಸದ್ಯ ಕ್ರಿಕೆಟ್​ ಪ್ರೇಮಿಗಳ ಮನಗೆದ್ದಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ ಭಾರತ ಲೀಡ್ಸ್‌ನಲ್ಲಿ ನಡೆದ ಮೊದಲ ಪಂದ್ಯವನ್ನು 5 ವಿಕೆಟ್‌ಗಳಿಂದ ಸೋತಿದೆ. ಕೊನೆಯ ದಿನದವರೆಗೂ ರೋಮಾಂಚಕವಾಗಿದ್ದ ಆ ಪಂದ್ಯದಲ್ಲಿ, ಭಾರತವು 371 ರನ್‌ಗಳ ಬೃಹತ್ ಗುರಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net