ರೋಹಿತ್ ಶರ್ಮ ನಾಯಕತ್ವ... ಏಷ್ಯಾಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಶ್ರೇಯಸ್​ಗೆ ಮತ್ತೊಂದು ಶಾಕ್​! | Shreyas Iyer

ವಿಜಯವಾಣಿ - 2025-08-22T164752.021
Published on

Shreyas Iyer: ಇದೇ ಸೆ.09ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಏಷ್ಯಾ ಕಪ್​ ಟಿ20 ಟೂರ್ನಿಗೆ ಇದೀಗ ಭಾರತ ತಂಡ ಪ್ರಕಟವಾಗಿದೆ. ಸೂರ್ಯಕುಮಾರ್ ಯಾದವ್​ ನಾಯಕನಾದರೆ, ಶುಭಮನ್ ಗಿಲ್ ಉಪನಾಯಕನಾಗಿ ಅಖಾಡಕ್ಕಿಳಿಯಲಿದ್ದಾರೆ. ಕಳೆದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕ್ಯಾಪ್ಟನ್ ಆಗಿ ಅದ್ಭುತ ಪ್ರದರ್ಶನ ನೀಡಿದ ಗಿಲ್​ಗೆ ಇದೀಗ ಬಿಸಿಸಿಐ ವಿಶೇಷ ಮನ್ನಣೆ ನೀಡಿರುವುದು ಹಲವರ ಹುಬ್ಬೇರಿಸಿದೆ. ಇದರ ಮಧ್ಯೆ ಸ್ಟಾರ್​ ಬ್ಯಾಟರ್​ ಶ್ರೇಯಸ್​ ಅಯ್ಯರ್​ರನ್ನು ತಂಡದಿಂದ ಕೈಬಿಟ್ಟಿರುವುದು ಮಾಜಿ ಕ್ರಿಕೆಟಿಗರ ಟೀಕೆಗೆ ಕಾರಣವಾಗಿದೆ.

ಏಕದಿನ ಕ್ಯಾಪ್ಟನ್​ ಬದಲಾವಣೆ?

ಕಳೆದ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಅದ್ಭುತ ಪ್ರದರ್ಶನ ನೀಡಿರುವ ಶ್ರೇಯಸ್​ ಅಯ್ಯರ್​ರನ್ನು ಏಷ್ಯಾಕಪ್​ಗೆ ಪರಿಗಣಿಸದೆ ಹೋಗಿದ್ದು, ಮಾಜಿ ಕ್ರಿಕೆಟಿಗರು ಮಾತ್ರವಲ್ಲದೇ ಸ್ವತಃ ಶ್ರೇಯಸ್​ ಅಯ್ಯರ್​ ತಂದೆಗೆ ಅತೀವ ಬೇಸರ ಮೂಡಿಸಿದೆ. ಈ ಕುರಿತು ಕ್ರಿಕೆಟ್​ ವಿಶ್ಲೇಷಕರು ಹಾಗೂ ಮಾಜಿ ಕ್ರಿಕೆಟಿಗರು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯನ್ನು ಟೀಕಿಸಿದ್ದಾರೆ. ಒಳ್ಳೆಯ ಬ್ಯಾಟರ್​ಗೆ ತಂಡದಲ್ಲಿ ಸ್ಥಾನ ಕೊಡದಿರುವುದು ಸರಿಯಲ್ಲ ಎಂದಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಅಯ್ಯರ್​ಗೆ ಮತ್ತೊಂದು ಶಾಕ್ ಎದುರಾಗಿದೆ. ​

ಈ ವರ್ಷದ ಆರಂಭದಲ್ಲಿ, ಟೆಸ್ಟ್ ನಾಯಕತ್ವ ಯಾರಿಗೆ ಹಸ್ತಾಂತರಿಸುವುದು ಎಂಬ ಚರ್ಚೆ ವ್ಯಾಪಕವಾಗಿತ್ತು, ಆದರೀಗ, ಗಮನ ಏಕದಿನ ಫಾರ್ಮೆಟ್​ ಮೇಲೆ ಮೂಡಿದೆ. ಪ್ರಸ್ತುತ, ಟಿ20 ಮತ್ತು ಟೆಸ್ಟ್​ ಕ್ರಿಕೆಟ್​ಗೆ ದಿಗ್ಗಜ ಬ್ಯಾಟರ್​ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದು, ಏಕದಿನದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಏಕದಿನ ಸ್ವರೂಪಕ್ಕೆ ಅವರ ನಾಯಕತ್ವ ಬಹುತೇಕ ಅನುಮಾನ ಎಂಬ ಪ್ರಶ್ನೆಗಳು ಚರ್ಚೆಯಾಗುತ್ತಿವೆ. ಈ ವಿಷಯ ಮುನ್ನೆಲೆಗೆ ಬಂದ ಹಿನ್ನೆಲೆ ಒಂದಷ್ಟು ವರದಿಗಳು, ಏಕದಿನ ಕ್ರಿಕೆಟ್​ ತಂಡಕ್ಕೆ ಶ್ರೇಯಸ್​ ಅಯ್ಯರ್​ ಕ್ಯಾಪ್ಟನ್​ ಆಗಿ ಮುಂದುವರಿಯಲಿದ್ದಾರೆ ಎಂದಿವೆ.

ಇದಕ್ಕೆ ಬಿಸಿಸಿಐ ಉತ್ತರ...

ರೋಹಿತ್ ಬದಲಿಗೆ ಶ್ರೇಯಸ್​ ಅಯ್ಯರ್​ ಪ್ರಮುಖ ಸ್ಪರ್ಧಿ ಎಂಬ ವರದಿಗಳನ್ನು ತಳ್ಳಿಹಾಕಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, "ನನಗೆ ಇದೊಂದು ಸುದ್ದಿ ಅಷ್ಟೇ. ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net