

ನಾಗ್ಪುರ: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಶುಭಾರಂಭ ಕಂಡಿದ್ದು, 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಏಕದಿನ ವಿಶ್ವಕಪ್ ಬಳಿಕ ಏಕದಿನ ತಂಡದಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ (Shreyas Iyer) ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. 36 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 59 ರನ್ ಬಾರಿಸಿದ ಶ್ರೇಯಸ್ ಅಯ್ಯರ್ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಂಡಿದ್ಧಾರೆ.
ಮೊಣಕಾಲಿನ ಗಾಯಕ್ಕೆ ತುತ್ತಾದ ವಿರಾಟ್ ಕೊಹ್ಲಿ (Virat Kohli) ಬದಲು ತಂಡದಲ್ಲಿ ಸ್ಥಾನ ಪಡೆದ ಶ್ರೇಯಸ್ ಅಯ್ಯರ್ (Shreyas Iyer) ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಇನ್ನೂ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕ ಬಗ್ಗೆ ಶ್ರೇಯಸ್ ಅಯ್ಯರ್ ಮಾತನಾಡಿದ್ದು, ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ಈ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್ (Shreyas Iyer), ಪಂದ್ಯ ನಡೆಯುವ ಹಿಂದಿನ ದಿನ ರಾತ್ರಿ ನಾನು ಫಿಲಂ ನೋಡುತ್ತ ಮಲಗಿದ್ದೆ. ನಾಯಕ ರೋಹಿತ್ ಶರ್ಮ ನನಗೆ ಕರೆ ಮಾಡಿ ವಿರಾಟ್ ಕೊಹ್ಲಿ ಅವರ ಮೊಣಕಾಲು ಊದಿಕೊಂಡಿರುವುದರಿಂದ ಬಹುಶಃ ನೀವು ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಿದರು. ಆ ಬಳಿಕ ನಾನು ನನ್ನ ರೂಮಿಗೆ ಹೋದೆ.
ಮೊದಲ ಪಂದ್ಯದಲ್ಲಿ ನಾನು ಆಡಬೇಕಾಗಿರಲಿಲ್ಲ. ವಿರಾಟ್ ಕೊಹ್ಲಿ ಗಾಯಕ್ಕೆ ತುತ್ತಾದ ಕಾರಣ ನನಗೆ ತಂಡದಲ್ಲಿ ಸ್ಥಾನ ಸಿಕ್ಕಿತು. ಯಾವ ಕ್ಷಣ ಬೇಕಾದರೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ನಾನು ಸಿದ್ಧನಾಗಿದ್ದೆ. ಏಷ್ಯಾಕಪ್ ಸಮಯದಲ್ಲೂ ನನಗೆ ಇದೇ ರೀತಿ ಆಗಿತ್ತು. ನನ್ನ ಬದಲು ಅವಕಾಶ ಪಡೆದ ಆಟಗಾರ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದರು ಎಂದು ಶ್ರೇಯಸ್ ಅಯ್ಯರ್ (Shreyas Iyer) ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ.
ಇನ್ನು ಶ್ರೇಯಸ್ ಅಯ್ಯರ್ ಹೇಳಿಕೆ ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದ್ದು, ಇವರು ಪ್ಲಾನ್ ಬಿ ಯ ಬಾಗವಾಗಿದ್ದರು ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಒಂದು ವೇಳೆ ವಿರಾಟ್ ಕೊಹ್ಲಿ ಇಂಜುರಿಯಾಗಿರದಿದ್ದರೆ, ಅಯ್ಯರ್ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಿರಲಿಲ್ಲ ಎಂಬುದು ಇದರಿಂದ ಖಚಿತವಾಗಿದೆ. ಸದ್ಯ ಕ್ರೀಡಾ ವಲಯದಲ್ಲಿ ಉದ್ಭವಿಸಿರುವ ಪ್ರಶ್ನೆ ಏನೆಂದರೆ ಕಟಕ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಅಯ್ಯರ್ ಅವರನ್ನು ಆಡಿಸಲಾಗುತ್ತದೆಯೇ ಎಂಬ ಅನುಮಾನ ಮೂಡಲು ಶುರುವಾಗಿದೆ.