ಕೆಕೆಆರ್​ ತಂಡಕ್ಕೆ ಐಪಿಎಲ್​ನಲ್ಲಿ ಕಳೆದ ಆವೃತ್ತಿಯ ನಾಯಕ ಮುಂದಿನ ವರ್ಷಕ್ಕೆ ಉಪನಾಯಕ!

ipl kkr web
Published on

ಕೋಲ್ಕತ: ಟೀಮ್​ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಮುಂದಿನ ವರ್ಷದ ಐಪಿಎಲ್​ 17ನೇ ಆವೃತ್ತಿಗೆ ಕೋಲ್ಕತ ನೈಟ್​ರೈಡರ್ಸ್​ ತಂಡದ ನಾಯಕರಾಗಿ ಗುರುವಾರ ಮರುನೇಮಕಗೊಂಡಿದ್ದಾರೆ. ಗಾಯದಿಂದಾಗಿ ಕಳೆದ ಆವೃತ್ತಿಯನ್ನು ತಪ್ಪಿಸಿಕೊಂಡಿದ್ದ 29 ವರ್ಷದ ಶ್ರೇಯಸ್​ ಬದಲಿಗೆ ನಿತೀಶ್​ ರಾಣಾ ಕೆಕೆಆರ್​ ತಂಡವನ್ನು ಮುನ್ನಡೆಸಿದ್ದರು. ಈ ಬಾರಿ ನಿತೀಶ್​ ರಾಣಾ ಅವರನ್ನು ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ.

ಕಳೆದ ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್​ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದ್ದ ಶ್ರೇಯಸ್​ ಅಯ್ಯರ್​ ಬಳಿಕ ತವರಿನಲ್ಲಿ ನಡೆದ ಆಸೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ್ದರು. ನಂತರದಲ್ಲಿ ಏಕದಿನ ವಿಶ್ವಕಪ್​ನಲ್ಲೂ 4ನೇ ಕ್ರಮಾಂಕದಲ್ಲಿ ಆಡಿದ 11 ಇನಿಂಗ್ಸ್​ಗಳಲ್ಲಿ 2 ಶತಕ ಮತ್ತು 3 ಅರ್ಧಶತಕಗಳ ಸಹಿತ 530 ರನ್​ ಬಾರಿಸಿದ್ದರು. ವಿಶ್ವಕಪ್​ನಲ್ಲಿ 4ನೇ ಕ್ರಮಾಂಕದಲ್ಲಿ ಆಡಿ 500ಕ್ಕೂ ಅಧಿಕ ರನ್​ ಗಳಿಸಿದ ಮೊದಲ ಭಾರತೀಯ ಬ್ಯಾಟರ್​ ಎಂಬ ಹೆಗ್ಗಳಿಕೆ ಅವರದಾಗಿದೆ.

ಕಳೆದ ಆವೃತ್ತಿಯಲ್ಲಿ ಕೆಕೆಆರ್​ ತಂಡ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಮತ್ತೆ ಕೆಕೆಆರ್​ ನಾಯಕತ್ವ ವಹಿಸಿಕೊಳ್ಳುತ್ತಿರುವುದಕ್ಕೆ ಸಂಭ್ರಮ ವ್ಯಕ್ತಪಡಿಸಿರುವ ಶ್ರೇಯಸ್​, "ನಿತೀಶ್​ ರಾಣಾ ನನ್ನ ಗೈರಿನಲ್ಲಿ ಕಳೆದ ಆವೃತ್ತಿಯಲ್ಲಿ ತಂಡವನ್ನು ಸಮರ್ಥವಾಗಿಯೇ ಮುನ್ನಡೆಸಿದ್ದರು. ಈ ಬಾರಿ ಅವರು ಉಪನಾಯಕರಾಗಿರುವುದು ನನ್ನ ನಾಯಕತ್ವಕ್ಕೂ ಬಲ ತುಂಬಲಿದೆ' ಎಂದು ಹೇಳಿದ್ದಾರೆ. 2022ರಲ್ಲಿ 12.25 ಕೋಟಿ ರೂ.ಗಳಿಗೆ ಶ್ರೇಯಸ್​ ಕೆಕೆಆರ್​ ತಂಡವನ್ನು ಕೂಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net