ಸ್ಟೋಕ್ಸ್​​ಗೆ ಬೆರಳು ತೋರಿಸಿ ಸೇಡು ತೀರಿಸಿಕೊಂಡ ಶ್ರೇಯಸ್​ ಅಯ್ಯರ್!

shreyas web
Published on

ವಿಶಾಖಪಟ್ಟಣ: ಭಾರತ ತಂಡ 2ನೇ ಟೆಸ್ಟ್​ನಲ್ಲಿ ಗೆಲುವು ದಾಖಲಿಸುವಲ್ಲಿ ಇಂಗ್ಲೆಂಡ್​ ತಂಡದ ನಾಯಕ ಬೆನ್​ ಸ್ಟೋಕ್ಸ್ ವಿಕೆಟ್​ ಪತನ ಪ್ರಮುಖ ಪಾತ್ರವಲಿಸಿತು. 4ನೇ ದಿನ ಭೋಜನ ವಿರಾಮದ ಬಳಿಕ ಆಂಗ್ಲರ ಚೇಸಿಂಗ್​ಗೆ ನಾಯಕ ಬೆನ್​ ಸ್ಟೋಕ್ಸ್​ ಆಸರೆಯಾಗಿದ್ದರು. ಫೋಕ್ಸ್​ ಜತೆ ಸ್ಟೋಕ್ಸ್​ 20 ರನ್​ ಸೇರಿಸಿದಾಗ ಶ್ರೇಯಸ್​ ಅಯ್ಯರ್​ ಭಾರತದ ಜಯದ ಹಾದಿ ಸುಲಭಗೊಳಿಸಿದರು. ಜತೆಗೆ ಸೇಡು ತೀರಿಸಿಕೊಂಡ ಸಂಭ್ರಮವನ್ನೂ ಕಂಡರು.

ಸಿಂಗಲ್ಸ್​ ಕಸಿದು ಸ್ಟ್ರೈಕ್​​ಗೆ ಬರಲು ಯತ್ನಿಸಿದ ಸ್ಟೋಕ್ಸ್​, ಶ್ರೇಯಸ್​ರ ಡೈರೆಕ್ಟ್​ ಹಿಟ್​ಗೆ ರನೌಟಾದರು. ಆಗ ಇನ್ನೂ 179 ರನ್​ ಬೇಕಿದ್ದರಿಂದ ಇಂಗ್ಲೆಂಡ್​ ಜಯದ ಆಸೆ ಕೈಚೆಲ್ಲುವಂತಾಯಿತು. ಭಾರತದ 2ನೇ ಇನಿಂಗ್ಸ್​ನಲ್ಲಿ ಲಾಂಗ್​ಆಫ್​ ಕಡೆಗೆ ಓಡಿಬಂದು ಅದ್ಭುತ ರೀತಿಯಲ್ಲಿ ಹಾರಿ ಕ್ಯಾಚ್​ ಹಿಡಿದಿದ್ದ ಸ್ಟೋಕ್ಸ್​, ತೋರು ಬೆರಳನ್ನು ತೋರಿಸಿ ಶ್ರೇಯಸ್​ ಔಟಾಗಿದ್ದನ್ನು ಸಂಭ್ರಮಿಸಿದ್ದರು. ಇದಕ್ಕೆ ಪ್ರತಿಯಾಗಿ ಶ್ರೇಯಸ್​ ಕೂಡ ಸ್ಟೋಕ್ಸ್​ರನ್ನು ರನೌಟ್​ ಮಾಡಿದ ಬಳಿಕ ತೋರು ಬೆರಳು ತೋರಿಸಿ ಸಂಭ್ರಮಿಸುವ ಮೂಲಕ ಸೇಡು ತೀರಿಸಿಕೊಂಡರು.

ಇದು ಕ್ರಿಕೆಟ್​ ಪ್ರೇಮಿಗಳಿಗೆ ಗಂಗೂಲಿ-ಫ್ಲಿಂಟಾಫ್​ ಜಟಾಪಟಿಯನ್ನು ನೆನಪಿಸಿತು. ಭಾರತದಲ್ಲಿ ಸರಣಿ ಸಮಬಲ ಸಾಧಿಸಿದಾಗ ಇಂಗ್ಲೆಂಡ್ ಆಲ್ರೌಂಡರ್​ ಆಂಡ್ರೋ ಫ್ಲಿಂಟಾಫ್​ ಅಂಗಿ ಬಿಚ್ಚಿ ಸಂಭ್ರಮಿಸಿದ್ದರೆ, ಇದಕ್ಕೆ ಪ್ರತೀಕಾರವಾಗಿ ಆಗಿ ನಾಯಕ ಸೌರವ್​ ಗಂಗೂಲಿ ಭಾರತ ತಂಡ ನಾಟ್​ವೆಸ್ಟ್​ ಸರಣಿಯ ಫೈನಲ್​ನಲ್ಲಿ ಗೆದ್ದಾಗ ಲಂಡನ್​​ನ ಲಾರ್ಡ್ಸ್​​ ಮೈದಾನದ ಬಾಲ್ಕನಿಯಲ್ಲಿ ಜೆರ್ಸಿ ಬಿಚ್ಚಿ ಸಂಭ್ರಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net