ಐಪಿಎಲ್​ನ ಸ್ಫೋಟಕ ಇನ್ನಿಂಗ್ಸ್ ಲೆಕ್ಕಕ್ಕಿಲ್ಲ? ಏಷ್ಯಾಕಪ್​ನಲ್ಲಿ ಶ್ರೇಯಸ್​ಗಿಲ್ಲ ಸ್ಥಾನ! ಅಗರ್ಕರ್ ಹೇಳಿದ್ದಿಷ್ಟು ​| Shreyas Iyer

ವಿಜಯವಾಣಿ - 2025-08-19T164933.896
Published on

Shreyas Iyer: ಸೆ.9ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಏಷ್ಯಾ ಕಪ್​ ಟೂರ್ನಿಗೆ ಇದೀಗ ಟೀಮ್ ಇಂಡಿಯಾ ತಂಡ ಅಧಿಕೃತವಾಗಿ ಪ್ರಕಟವಾಗಿದೆ. ಇಂದು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಸಿಸಿಐನ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್​, ತಂಡದ ಜವಾಬ್ದಾರಿಯನ್ನು ಸೂರ್ಯಕುಮಾರ್ ಯಾದವ್ ಮತ್ತು ಶುಭಮನ್ ಗಿಲ್​ ಹೆಗಲಿಗೆ ಹೊರಿಸಿದ್ದಾರೆ.

ನಾಯಕನಾಗಿ ತಂಡವನ್ನು ಸೂರ್ಯಕುಮಾರ್ ಯಾದವ್​ ಮುನ್ನಡೆಸಿದರೆ, ಉಪನಾಯಕನಾಗಿ ಶುಭಮನ್ ಗಿಲ್ ಕಣಕ್ಕಿಳಿಯಲಿದ್ದಾರೆ. ಈ ಮಧ್ಯೆ ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಗಿಲ್​ ಟಿ20 ತಂಡಕ್ಕೆ ಕಮ್​ಬ್ಯಾಕ್ ಮಾಡಿದರೆ, ಅತ್ತ ಶ್ರೇಯಸ್​ ಅಯ್ಯರ್​ ಮತ್ತು ಯಶಸ್ವಿ ಜೈಸ್ವಾಲ್​ಗೆ ಸ್ಥಾನ ಕೊಟ್ಟಿಲ್ಲ. ಇದು ಒಂದಷ್ಟು ಕ್ರಿಕೆಟ್​ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈ ಕುರಿತು ಕೆಲವರು ಜಾಲತಾಣಗಳಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯನ್ನು ಟೀಕಿಸಿದ್ದಾರೆ.

ಅಗರ್ಕರ್​ ಕೊಟ್ಟ ಕಾರಣವೇನು?

"ಶ್ರೇಯಸ್ ಅಯ್ಯರ್​ರನ್ನು ತಂಡಕ್ಕೆ ಆಯ್ಕೆ ಮಾಡದಿರುವುದು ಅವರ ತಪ್ಪಲ್ಲ. ಇದು ನಮ್ಮ ತಪ್ಪೂ ಅಲ್ಲ. ಅಯ್ಯರ್​, ಇನ್ನೂ ಕೆಲವು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಆದರೆ, ಅವರ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕೆಂದು ನೀವು ಹೇಳಿ? ತಂಡದಲ್ಲಿ ಕೇವಲ ಹದಿನೈದು ಸ್ಥಾನಗಳಿವೆ. ಹೀಗಾಗಿ, ನಾವು ಶ್ರೇಯಸ್​ರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಐಪಿಎಲ್​ನಲ್ಲಿ ಸ್ಫೋಟಕ ಇನ್ನಿಂಗ್ಸ್​

ಕಳೆದ 18ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ನಾಯಕನಾಗಿ ಕಣಕ್ಕಿಳಿದ ಶ್ರೇಯಸ್​ ಅಯ್ಯರ್​, ತಂಡವನ್ನು ಪ್ಲೇಆಫ್​ಗೆ ಎಂಟ್ರಿ ಕೊಡಿಸಿದ್ದಲ್ಲದೇ, ತಂಡದ ಪರ ಬ್ಯಾಟರ್​ ಆಗಿ ಅದ್ಭುತ ಹಾಗೂ ಸ್ಫೋಟಕ ಇನ್ನಿಂಗ್ಸ್​ ಕೊಡುಗೆ ನೀಡಿದರು. ಇದು ಕ್ರಿಕೆಟ್​ ಪ್ರಿಯರ ಗಮನ ಸೆಳೆಯಿತು. ಇನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ 243 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು. ಮತ್ತು ತಂಡ ಈ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕತ್ವದಲ್ಲಿ ಹಾಗೂ ಬ್ಯಾಟಿಂಗ್​ ಪ್ರದರ್ಶನದಲ್ಲಿ ತಮ್ಮ ಕಾರ್ಯವೈಖರಿಯನ್ನು ಎಲ್ಲರೂ ಮೆಚ್ಚುವಂತೆ ಪ್ರದರ್ಶಿಸಿದ್ದ ಶ್ರೇಯಸ್​ಗೆ ಏಷ್ಯಾ ಕಪ್​ನಲ್ಲಿ ಸ್ಥಾನ ಸಿಗದಿರುವುದು ಸದ್ಯ ಹಲವರನ್ನು ಕೆರಳಿಸಿದೆ ಹಾಗೂ ಬಿಸಿಸಿಯ ಆಯ್ಕೆಯನ್ನು ಟೀಕಿಸುವಂತೆ ಮಾಡಿದೆ.

ಭಾರತ ತಂಡ

ಸೂರ್ಯ ಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಹರ್ಷಿತ್ ರಾಣಾ ರಿಂಕು ಸಿಂಗ್,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net