ನಾವು ಹೋಗುತ್ತಿಲ್ಲ... ಶ್ರೇಯಸ್​ ಆರೋಗ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ತಂದೆ ಸಂತೋಷ್ ಅಯ್ಯರ್! Shreyas Iyer

Shreyas Iyer
Published on

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​​ ಶ್ರೇಯಸ್ ಅಯ್ಯರ್ ( Shreyas Iyer ) ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಅದೇನೆಂದರೆ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದ ಅಯ್ಯರ್, ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಅಯ್ಯರ್​ ಅವರು ಸಿಡ್ನಿಯ ಸೇಂಟ್ ವಿನ್ಸೆಂಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಯ್ಯರ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದು, ಈ ವಾರದೊಳಗೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಶ್ರೇಯಸ್ ಅಯ್ಯರ್​ ತಂದೆ ಸಂತೋಷ್ ಅಯ್ಯರ್ ದೃಢಪಡಿಸಿದ್ದಾರೆ.

ಶ್ರೇಯಸ್​ ಅಯ್ಯರ್​ ಅವರು ಬಹು ಬೇಗನೇ ಚೇತರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅವರಿಗೆ ಸಿಡ್ನಿಯ ಅತ್ಯುತ್ತಮ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಒಂದು ವಾರದೊಳಗೆ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ. ಸಾಧ್ಯವಾದರೆ, ಅದಕ್ಕೂ ಮೊದಲೇ ಮನೆಗೆ ಮರಳಬಹುದು. ಅಯ್ಯರ್​ ಅವರು ಟಿ20 ತಂಡದ ಭಾಗವಾಗಿರದ ಕಾರಣ ಅವರು ನೇರವಾಗಿ ಮನೆಗೆ ಬರಲಿದ್ದಾರೆ. ಆದ್ದರಿಂದ ನಾವು ಸಿಡ್ನಿಗೆ ಹೋಗುವ ನಿರ್ಧಾರವನ್ನು ಬದಲಾಯಿಸಿದ್ದೇವೆ. ನಾವು ಅಲ್ಲಿಗೆ ಹೋಗುತ್ತಿಲ್ಲ ಎಂದು ಸಂತೋಷ್ ಅಯ್ಯರ್ ಡೆಕ್ಕನ್ ಕ್ರಾನಿಕಲ್‌ಗೆ ತಿಳಿಸಿದ್ದಾರೆ.

ಅಯ್ಯರ್ ಗಾಯಗೊಂಡಿದ್ದು ಹೇಗೆ?

ಸಿಡ್ನಿಯಲ್ಲಿ ಆಸೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಅಲೆಕ್ಸ್ ಕ್ಯಾರಿ ಕ್ಯಾಚ್ ಹಿಡಿಯುವಾಗ ಶ್ರೇಯಸ್ ಅಯ್ಯರ್ ಅವರ ಎಡ ಪಕ್ಕೆಲುಬಿಗೆ ಚೆಂಡು ಬಲವಾಗಿ ತಗುಲಿತು. ಈ ವೇಳೆ ಅಯ್ಯರ್​ ಅವರು ತೀವ್ರ ನೋವಿನಿಂದ ನರಳಾಡಿ ಮೈದಾನವನ್ನು ತೊರೆದರು. ಆರಂಭದಲ್ಲಿ ಅವರಿಗಾಗಿರುವ ಗಾಯ ಚಿಕ್ಕದು ಎಂದು ಎಲ್ಲರೂ ಭಾವಿಸಿದರು. ಆದರೆ, ಡ್ರೆಸ್ಸಿಂಗ್ ರೂಮ್​ಗೆ ಹೋದ ಅಯ್ಯರ್ ಶೀಘ್ರದಲ್ಲೇ ಮೂರ್ಛೆ ಹೋದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಸ್ಕ್ಯಾನಿಂಗ್ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಸ್ಕ್ಯಾನ್‌ನಲ್ಲಿ ಆಂತರಿಕ ರಕ್ತಸ್ರಾವವಾಗಿರುವುದು ಕಂಡುಬಂತು. ತಕ್ಷಣ ಅವರನ್ನು ಐಸಿಯುಗೆ ದಾಖಲಿಸಲಾಯಿತು ಮತ್ತು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಅಯ್ಯರ್​​ ಗಾಯಗೊಂಡಿರುವ ಸುದ್ದಿ ಕೇಳಿ ತೀವ್ರ ಚಿಂತಿತರಾಗಿದ್ದ ಪಾಲರು ಸಿಡ್ನಿಗೆ ಹಾರಲು ಸಿದ್ಧರಾಗಿದ್ದರು. ಆದರೆ, ಅಯ್ಯರ್​ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಹಿನ್ನೆಲೆಯಲ್ಲಿ ತಮ್ಮ ಸಿಡ್ನಿ ಪ್ರವಾಸವನ್ನು ಪಾಲಕರು ರದ್ದುಗೊಳಿಸಿದ್ದಾರೆ. ಸದ್ಯ ಶ್ರೇಯಸ್ ಅವರ ಸ್ಥಿತಿ ಸ್ವಲ್ಪ ಸುಧಾರಿಸಿದ್ದು, ಅವರನ್ನು ಈಗ ಐಸಿಯುನಿಂದ ವಾರ್ಡ್​ಗೆ ಸ್ಥಳಾಂತರ ಮಾಡಲಾಗಿದೆ.

ಟೀಮ್​ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್​ ಕೂಡ ಅಯ್ಯರ್​ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ನಾನು ಅಯ್ಯರ್ ಅವರೊಂದಿಗೆ ಮಾತನಾಡಿದೆ ಮತ್ತು ಅವರು ಚೆನ್ನಾಗಿದ್ದಾರೆ ಎಂದು ಹೇಳಿದರು. ಗಾಯಗೊಂಡ ಹಿನ್ನೆಲೆಯಲ್ಲಿ ಶ್ರೇಯಸ್ ಅಯ್ಯರ್​ ಅವರು ಮುಂಬರುವ ತಿಂಗಳುಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net