ಏಷ್ಯಾಕಪ್​ ಟೂರ್ನಿಯಿಂದ ಕೈಬಿಟ್ಟ ವಿಚಾರ; ಕಡೆಗೂ ಮೌನ ಮುರಿದ ಶ್ರೇಯಸ್​ ಅಯ್ಯರ್​ | Shreyas Iyer

ವಿಜಯವಾಣಿ (46)
Published on

Shreyas Iyer: ಇದೇ ಸೆ.09ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಏಷ್ಯಾ ಕಪ್ ಟೂರ್ನಿಗೆ ಈಗಾಗಲೇ ಭಾರತ ತಂಡ ಪ್ರಕಟವಾಗಿದೆ. ವೇಗಿ ಜಸ್ಪ್ರಿತ್ ಬುಮ್ರಾ, ಶುಭಮನ್ ಗಿಲ್​, ರಿಂಕು ಸಿಂಗ್​ ಸೇರಿದಂತೆ ಹಲವರಿಗೆ ಬಿಸಿಸಿಐ ತಂಡದಲ್ಲಿ ಸ್ಥಾನ ಕೊಟ್ಟರೆ, ಸ್ಟಾರ್​ ಬ್ಯಾಟರ್​ಗಳಾದ​ ಶ್ರೇಯಸ್​ ಅಯ್ಯರ್​ ಮತ್ತು ಯಶಸ್ವಿ ಜೈಸ್ವಾಲ್​ಗೆ ಸ್ಥಾನ ಕೊಡಲಿಲ್ಲ. ಇದು ಕ್ರಿಕೆಟ್​ ಅಭಿಮಾನಿಗಳಲ್ಲಿ ತೀರ ಬೇಸರ ಮೂಡಿಸಿತು. ಅಯ್ಯರ್​ಗೆ ಸ್ಥಾನ ಕೊಡದಿರುವುದು ಒಪ್ಪುವಂತದ್ದಲ್ಲ ಎಂದು ಫ್ಯಾನ್ಸ್​, ಮಾಜಿ ಕ್ರಿಕೆಟಿಗರು ಬಿಸಿಸಿಐ ಆಯ್ಕೆಗಾರರನ್ನು ಟೀಕಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಶ್ರೇಯಸ್ ಅಯ್ಯರ್​​​ ಮೌನ ಮುರಿದಿದ್ದಾರೆ.

ಐಪಿಎಲ್​ 18ರಲ್ಲಿ ಸ್ಫೋಟಕ ಇನ್ನಿಂಗ್ಸ್​

ಕಳೆದ ಐಪಿಎಲ್​ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ನಾಯಕನಾಗಿ ಮಿಂಚಿದ ಶ್ರೇಯಸ್​ ಅಯ್ಯರ್​, ತಂಡದ ಪರ ಅದ್ಭುತ ಇನ್ನಿಂಗ್ಸ್​ ನೀಡಿದರು. ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ಆಟಗಾರ ಎಂದೇ ಗುರುತಿಸಿಕೊಂಡಿರುವ ಅಯ್ಯರ್​ಗೆ ಏಷ್ಯಾಕಪ್​ ಟೂರ್ನಿಗೆ ತಂಡದಲ್ಲಿ ಸ್ಥಾನ ಕೊಡದೆ ಹೋಗಿದ್ದು ಮಾಜಿ ಹಿರಿಯ ಕ್ರಿಕೆಟಿಗರನ್ನು ಕೆರಳಿಸಿತು. ಇಲ್ಲಿಯವರೆಗೆ ಈ ವಿಚಾರ ಕುರಿತು ಎಲ್ಲಿಯೂ ಪ್ರತಿಕ್ರಿಯಿಸದ ಅಯ್ಯರ್​, ಇತ್ತೀಚೆಗೆ ನಡೆದ iQOOO ಪಾಡ್‌ಕ್ಯಾಸ್ಟ್‌ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮನ್ನು ಆಯ್ಕೆ ಮಾಡದ ಬಿಸಿಸಿಐ ಆಯ್ಕೆಗಾರರಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

ಶ್ರೇಯಸ್​ ಪ್ರತಿಕ್ರಿಯೆ

"ಯಾವುದೇ ಒಬ್ಬ ಆಟಗಾರನು ಅಂತಿಮ ತಂಡದಲ್ಲಿರಲು ಅರ್ಹನಾಗಿದ್ದು, ಆ ತಂಡದಲ್ಲಿ ಸ್ಥಾನ ಪಡೆಯದೆ ಹೋದರೆ ಖಂಡಿತ ನಿರಾಶೆಗೆ ಒಳಗಾಗುತ್ತಾನೆ. ನಮಗೆ ಅವಕಾಶ ಸಿಕ್ಕಾಗಲೆಲ್ಲ ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಇರಬೇಕು. ಸ್ಥಿರವಾದ ಪ್ರದರ್ಶನ ನೀಡುವುದು ಅವಶ್ಯ. ನಾವು ಪ್ರತಿನಿಧಿಸುವ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಧ್ಯವಾದಷ್ಟು ಶ್ರಮಿಸಬೇಕು. ಯಾರೋ ನಮ್ಮನ್ನು ನೋಡುತ್ತಿದ್ದಾರೆಯೋ, ಇಲ್ಲವೋ ಎಂಬುದನ್ನು ಲೆಕ್ಕಿಸದೆ ನಮ್ಮ ಕೆಲಸವನ್ನು ಬದ್ಧತೆ, ಶ್ರದ್ಧೆಯಿಂದ ಮಾಡುತ್ತಾ ಸಾಗಬೇಕು" ಎಂದು ಅಯ್ಯರ್ ಹೇಳಿದ್ದಾರೆ.

ಟೀಮ್ ಇಂಡಿಯಾ ಪರ

ಇದುವರೆಗೆ ಟೀಮ್ ಇಂಡಿಯಾ ಪರ 14 ಟೆಸ್ಟ್, 70 ಏಕದಿನ ಮತ್ತು 51 ಟಿ20 ಪಂದ್ಯಗಳನ್ನಾಡಿರುವ ಶ್ರೇಯಸ್​, ಟೆಸ್ಟ್‌ನಲ್ಲಿ 36.9 ಸರಾಸರಿಯಲ್ಲಿ 811 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳು ಸೇರಿವೆ. ಏಕದಿನ ಪಂದ್ಯಗಳಲ್ಲಿ 48.2 ಸರಾಸರಿಯಲ್ಲಿ 2,845 ರನ್ ಬಾರಿಸಿದ್ದಾರೆ. ಇದರಲ್ಲಿ 5 ಶತಕ ಮತ್ತು 22 ಅರ್ಧಶತಕಗಳು ಸೇರಿವೆ. ಇನ್ನು ಟಿ20ಯಲ್ಲಿ ಅವರು 30.7 ಸರಾಸರಿಯಲ್ಲಿ 1,104 ರನ್ ಗಳಿಸಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಸೇರಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net