ಈಗ ಅರ್ಜೆಂಟ್​ ಆಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಏಕದಿನ ಪಂದ್ಯ ನಡೀಬೇಕು...; ಶೋಯೆಬ್​ ಅಕ್ತರ್​ ಒತ್ತಾಯ

Aktar 26 Dec 19
Published on

ಕರಾಚಿ: ಸಾಂಪ್ರದಾಯಿಕ ಎದುರಾಳಿಗಳು ಎಂದೇ ಕರೆಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡುವೆ 2012-13ರಿಂದ ಒಂದೂ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ.

ಪಾಕಿಸ್ತಾನಿ ಉಗ್ರರಿಂದ ಭಾರತೀಯ ಸೇನಾ ನೆಲೆಗಳ ಮೇಲೆ ಉಗ್ರದಾಳಿ ನಿರಂತರವಾಗಿ ನಡೆಯುತ್ತಿದೆ. ಇದೇ ಕಾರಣಕ್ಕೆ ಭಾರತ ಪಾಕಿಸ್ತಾನದೊಂದಿಗಿನ ಕ್ರಿಕೆಟ್​ ಸಂಬಂಧವನ್ನೂ ಕಡಿದುಕೊಂಡಿದೆ. ಐಸಿಸಿ, ಏಷ್ಯಾಕಪ್​ಗಳಲ್ಲಿ ಭಾರತ ಮತ್ತು ಪಾಕ್​ ತಂಡಗಳು ಮುಖಾಮುಖಿಯಾಗುತ್ತವೆ ಹೊರತು 2007ರಿಂದಲೂ ಇವೆರಡೇ ತಂಡಗಳು ಯಾವುದೇ ಟೆಸ್ಟ್​ ಅಥವಾ ಏಕದಿನ ಪಂದ್ಯಗಳನ್ನು ಆಡಿಲ್ಲ.

ಹೀಗಿರುವಾಗ ಪಾಕಿಸ್ತಾನ ಮಾಜಿ ಕ್ರಿಕೆಟರ್​, ವೇಗದ ಬೌಲರ್​ ಶೋಯೆಬ್​ ಅಕ್ತರ್​ ಈ ಕರೊನಾ ಸಂದರ್ಭದಲ್ಲಿ ತುರ್ತಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮೂರು ಪಂದ್ಯಗಳುಳ್ಳ ಏಕದಿನ ಸರಣಿಯನ್ನು ಏರ್ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದೇನಿದು ಕರೊನಾ ವೈರಸ್ ಈ ಪರಿ ಹಬ್ಬುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್ಟಾ? ಅದೂ ಭಾರತ ಮತ್ತು ಪಾಕಿಸ್ತಾನ ನಡುವೆ ಎಂದು ನಾವೆಲ್ಲ ಹುಬ್ಬೇರಿಸುವುದು ಸಜಹ..ಆದರೆ ಶೋಯೆಬ್​ ಅಖ್ತರ್​ ನಿಜಕ್ಕೂ ಇದೊಂದು ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಅದೂ ಕೂಡ ಕೊವಿಡ್​-19 ರ ವಿರುದ್ಧ ಹೋರಾಡಲು ಎರಡೂ ದೇಶಗಳಿಗೆ ಹಣ ಸಂಗ್ರಹ ಮಾಡುವ ಉದ್ದೇಶದಿಂದ!

ಈಗ ಎಲ್ಲೆಡೆ ಕೊವಿಡ್​-19 ಸಂಕಷ್ಟ ಎದುರಾಗಿದೆ. ಈ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳುಳ್ಳ ಏಕದಿನ ಸರಣಿಯನ್ನು ಆಯೋಜಿಸಬೇಕು. ಈ ಪಂದ್ಯಗಳಿಂದ ಸಂಗ್ರಹವಾದ ಹಣವನ್ನು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ಸಮಾನವಾಗಿ ಹಂಚಬೇಕು. ಇದನ್ನು ಕರೊನಾ ವೈರಸ್​ ವಿರುದ್ಧ ಹೋರಾಟಕ್ಕೆ, ಸದ್ಯ ಉಂಟಾಗಿರುವ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಬಳಸಿಕೊಳ್ಳಬೇಕು ಎಂದು ಶೋಯೆಬ್​ ಸಲಹೆ ನೀಡಿದ್ದಾರೆ.

ಸದ್ಯ ಎಲ್ಲರೂ ಮನೆಯಲ್ಲಿಯೇ ಕುಳಿತಿದ್ದಾರೆ. ಯಾಕೆಂದರೆ ಎಲ್ಲ ಕಡೆ ಲಾಕ್​ಡೌನ್​ ಇದೆ. ಖಂಡಿತ ಈ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸಲು ಉತ್ಸಾಹ ತೋರಿಸುತ್ತಾರೆ. ದುಬೈನ ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಬೇಕು. ಹಾಗೇ ಎರಡೂ ಸರ್ಕಾರಗಳು ವಿಮಾನಗಳ ವ್ಯವಸ್ಥೆಯನ್ನೂ ಮಾಡಬೇಕು ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಪುನಃ ಆರಂಭವಾಗಲು ಇದು ಕಾರಣವಾಗುತ್ತದೆ ಮತ್ತು ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧವೂ ಸುಧಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕರೊನಾ ವಿರುದ್ಧ ಹೋರಾಟದಲ್ಲಿ ಪಾಕಿಸ್ತಾನ ಮತ್ತು ಭಾರತ ಪರಸ್ಪರ ಸಹಾಯ ಮಾಡಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net