

ಬೆಂಗಳೂರು: ಟೂರ್ನಿಯ ದುಬಾರಿ ಆಟಗಾರ ಅಭಿನವ್ ಮನೋಹರ್ (50 ರನ್, 25 ಎಸೆತ, 1 ಬೌಂಡರಿ, 5 ಸಿಕ್ಸರ್) ಸ್ಫೋಟಕ ಅರ್ಧಶತಕ ಹಾಗೂ ನಾಯಕ ಶ್ರೇಯಸ್ ಗೋಪಾಲ್ (46 ರನ್, 32 ಎಸೆತ, 1 ಬೌಂಡರಿ, 3 ಸಿಕ್ಸರ್ ಹಾಗೂ 30ಕ್ಕೆ 1 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಶಿವಮೊಗ್ಗ ಲಯನ್ಸ್ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಮಂಗಳೂರು ಡ್ರಾೃಗನ್ಸ್ ಎದುರು 9 ರನ್‌ಗಳಿಂದ ಗೆದ್ದು ಶುಭಾರಂಭ ಕಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ನೂತನ ತಂಡಗಳ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಶಿವಮೊಗ್ಗ ಲಯನ್ಸ್ 5 ವಿಕೆಟ್‌ಗೆ 176 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಆರಂಭಿಕರಾದ ರೋಹನ್ ಕದಂ (27) ಹಾಗೂ ನಿಹಾಲ್ ಉಳ್ಳಾಲ್ (28) ಮೊದಲ ವಿಕೆಟ್‌ಗೆ 50 ಪೇರಿಸಿ ಉತ್ತಮ ಆರಂಭ ಒದಗಿಸಿದರು. ಬಳಿಕ 4ನೇ ವಿಕೆಟ್‌ಗೆ ಜತೆಯಾದ ಅಭಿನವ್ ಮನೋಹರ್ ಹಾಗೂ ಶ್ರೇಯಸ್ ಗೋಪಾಲ್ 93 ರನ್‌ಗಳ ಜತೆಯಾಟ ಮೂಲಕ ಉತ್ತಮ ಮೊತ್ತ ದಾಖಲಿಸಲು ನೆರವಾದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅಭಿನವ್ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸವಾಲಿನ ಮೊತ್ತ ಬೆನ್ನಟ್ಟಿದ ಮಂಗಳೂರು ಡ್ರಾೃಗನ್ಸ್ ತಂಡ ಅನಿರುದ್ಧ ಜೋಶಿ (50 ರನ್, 31 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕದ ಹೊರತಾಗಿಯೂ 7 ವಿಕೆಟ್‌ಗೆ 167 ರನ್‌ಗಳಿಸಲಷ್ಟೇ ಶಕ್ತವಾಯಿತು. 76 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮಂಗಳೂರು ಪರ ಕೆ. ಸಿದ್ದಾರ್ಥ್ (46) ಹಾಗೂ ಅನಿರುದ್ಧ 6ನೇ ವಿಕೆಟ್‌ಗೆ 83 ರನ್ ಪೇರಿಸಿ ಹೋರಾಟ ತೋರಿದರೂ, ಸೋಲಿನ ಅಂತರ ತಗ್ಗಿಸಲಷ್ಟೇ ಸಾಧ್ಯವಾಯಿತು.
ಶಿವಮೊಗ್ಗ ಲಯನ್ಸ್: 5 ವಿಕೆಟ್‌ಗೆ 176 (ರೋಹನ್ 27, ನಿಹಾಲ್ 28, ರೋಹಿತ್ 18, ಶ್ರೇಯಸ್ 46, ಅಭಿನವ್ 50, ಜಿ. ನವೀನ್ 19ಕ್ಕೆ4, ಆದಿತ್ಯ 19ಕ್ಕೆ1). ಮಂಗಳೂರು ಡ್ರಾೃಗನ್ಸ್ : 7 ವಿಕೆಟ್‌ಗೆ 167 (ಬಿಆರ್ ಶರತ್ 15, ರೋಹನ್ ಪಾಟೀಲ 23, ನಿಕಿನ್ ಜೋಸ್ 6, ಕೆ. ಸಿದ್ದಾರ್ಥ್ 46, ಅನೀಶ್ವರ್ 2, ನವೀನ್ 19, ಅನಿರುದ್ಧ 50, ಕೆ. ಗೌತಮ್ 2, ನಿಶ್ಚಿತ್ ರಾವ್ 28ಕ್ಕೆ2, ಪ್ರಣವ್ 21ಕ್ಕೆ2).
ಟೈಗರ್ಸ್‌ಗೆ ಸತತ ಎರಡನೇ ಗೆಲುವು
ಸರ್ವಾಂಗೀಣ ನಿರ್ವಹಣೆ ತೋರಿದ ಹುಬ್ಬಳ್ಳಿ ಟೈಗರ್ಸ್ ತಂಡ ದಿನದ 2ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಮನೀಷ್ ಪಾಂಡೆ ಬಳಗ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಲ್ಬರ್ಗಾ, ಮನ್ವಂತ್ ಕುಮಾರ್ (21ಕ್ಕೆ 3) ಬಿಗಿ ಬೌಲಿಂಗ್ ದಾಳಿಗೆ ಕುಸಿದು 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಟೈಗರ್ಸ್ ತಂಡ ವಿಕೆಟ್ ಕೀಪರ್-ಬ್ಯಾಟರ್ ಲವನೀತ್ ಸಿಸೋಡಿಯಾ (61 ರನ್, 40 ಎಸೆತ, 5 ಬೌಂಡರಿ, 3 ಸಿಕ್ಸರ್) ಅರ್ಧಶತಕದ ನೆರವಿನಿಂದ 15.2 ಓವರ್‌ಗಳಲ್ಲಿ 3 ವಿಕೆಟ್‌ಗೆ 141 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಗುಲ್ಬರ್ಗಾ ಮಿಸ್ಟಿಕ್ಸ್: 19.3 ಓವರ್‌ಗಳಲ್ಲಿ 138 (ಎಲ್‌ಆರ್ ಚೇತನ್ 10, ಸ್ಮರಣ್ 15, ಅನೀಶ್ 16, ಅಮಿತ್ 19, ಮನ್ವಂತ್ 21ಕ್ಕೆ 3, ವಿದ್ವತ್ 24ಕ್ಕೆ 2). ಹುಬ್ಬಳ್ಳಿ ಟೈಗರ್ಸ್: 15.2 ಓವರ್‌ಗಳಲ್ಲಿ 3 ವಿಕೆಟ್‌ಗೆ 141 (ಲವನೀತ್ 61, ತಾಹ 0, ಶ್ರೀಜೀತ್ 47, ಮನೀಷ್ ಪಾಂಡೆ 15*, ಅಭಿಲಾಷ್ 23ಕ್ಕೆ 2).
ಮಂಗಳವಾರದ ಪಂದ್ಯಗಳು
ಮೈಸೂರು ವಾರಿಯರ್ಸ್- ಮಂಗಳೂರು ಡ್ರಾೃಗನ್ಸ್
ಆರಂಭ: ಮಧ್ಯಾಹ್ನ 1ಕ್ಕೆ
ಎರಡನೇ ಪಂದ್ಯ
ಶಿವಮೊಗ್ಗ ಲಯನ್ಸ್ -ಬೆಂಗಳೂರು ಬ್ಲಾಸ್ಟರ್ಸ್
ಆರಂಭ: ಸಂಜೆ 5.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.