ಸೋತಾಗ ಮೇಲೆತ್ತುವ ಕೈಗಳಾಗಿ: ಜಿಎಸ್‌ಎನ್ ಕರೆ

7 smg 5
Published on

ಶಿವಮೊಗ್ಗ: ಬದುಕಿನಲ್ಲಿ ಸಂಸ್ಕಾರವೆಂಬುದು ಅತಿಮುಖ್ಯವಾಗಿದ್ದು ಗೆದ್ದಾಗ ಚಪ್ಪಾಳೆ ತಟ್ಟುವ ಕೈಗಳಿಗಿಂತ ಸೋತಾಗ ಮೇಲೆತ್ತುವ ಕೈಗಳಾಗಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಕರೆ ನೀಡಿದರು.

ನಗರದ ಎನ್‌ಇಎಸ್‌ನ ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ, ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಹಾಗೂ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ನೆಹರು ಕ್ರೀಡಾಂಗಣದಲ್ಲಿ ಎರಡು ದಿನಗಳ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಂತರ ಕಾಲೇಜುಗಳ ಮಹಿಳಾ ಥ್ರೋ ಬಾಲ್ ಮತ್ತು ಟೆನಿಕಾಯ್ಟ್ ಪಂದ್ಯಾವಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬಲ್ಲ ಆತ್ಮವಿಶ್ವಾಸವನ್ನು ಕ್ರೀಡೆ ನೀಡಲಿದೆ. ಸ್ಫರ್ಧೆಗಳಲ್ಲಿ ಶ್ರದ್ಧೆಯಿಂದ ಭಾಗವಹಿಸಬೇಕು. ಅಂಜಿಕೆಯಿಂದಾಗುವ ಹಿಂಜರಿಕೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸೋಲಿನ ನೋವು ಮನಸ್ಸಿಗೆ ಇಳಿದರೆ ಅಥವಾ ಗೆಲುವು ಅಹಂಕರವಾಗಿ ರೂಪಗೊಂಡರೇ ಅದು ಮನುಷ್ಯನ ಅಧೋಗತಿಗೆ ಕಾರಣವಾಗುತ್ತದೆ. ಹಾಗಾಗಿಯೇ ಸಮಾನವಾಗಿ ಎದುರಿಸುವ ಮನೋಸ್ಥೈರ್ಯ ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪ್ರಾಚಾರ್ಯ ಪ್ರೊ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕ್ರೀಡಾ ನಿರ್ದೇಶಕ ಡಾ. ಖಾಲೀದ್ ಖಾನ್, ಸಿ.ಬಿ.ಆರ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಸ್.ಕಾಂತರಾಜ್ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳ ಸುಮಾರು 16ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡಗಳು ಥ್ರೋ ಬಾಲ್ ಮತ್ತು ಟೆನಿಕಾಯ್ಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net