ಚಾನು ಹೆಸರು ಒಲಿಂಪಿಕ್ಸ್ ಪದಕ ಪಟ್ಟಿಗೆ ಸೇರುತ್ತಿದ್ದಂತೆ ಅಣ್ಣನಿಗೆ ನೆನಪಾಯಿತು ಕಟ್ಟಿಗೆ!

Capture
Published on

ನವದೆಹಲಿ: ಬೆಳೆಯುವ ಸಿರಿ ಮೊಳಕೆಯಲ್ಲೇ.. ಅನ್ನೋದಕ್ಕೆ ಒಲಿಂಪಿಕ್​ನಲ್ಲಿ ಬೆಳ್ಳಿ ಪದಕ ಗಳಿಸಿ ದೇಶಕ್ಕೆ ಹೆಗ್ಗಳಿಕೆ ತಂದಿರುವ ವೇಟ್​ ಲಿಫ್ಟರ್ ಮೀರಾಬಾಯಿ ಚಾನು ಅವರ ಜೀವನವೇ ಉದಾಹರಣೆ. ಇಂದು ಪದಕಗಳ ಪಟ್ಟಿಯಲ್ಲಿ ಚಾನು ಹೆಸರು ಕೇಳಿಬಂದಿದೆ. ಆದರೆ ಅವರ ಸಾಧನೆಯ ಕಟ್ಟೆಗೆ ಕಟ್ಟಿಗೆಯೇ ಇಟ್ಟಿಗೆಯಾಗಿತ್ತು ಎಂದರೂ ಅತಿಶಯೋಕ್ತಿಯೇನಲ್ಲ. ಅಂಥದ್ದೊಂದು ವಿಷಯವನ್ನು ಅವರ ಅಣ್ಣನೇ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದು, ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬುದಕ್ಕೆ ಮತ್ತೊಮ್ಮೆ ಪುಷ್ಟಿ ಸಿಕ್ಕಂತಾಗಿದೆ.

ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮೀರಾಬಾಯಿ ಚಾನು ವೇಟ್​ಲಿಫ್ಟಿಂಗ್​ನಲ್ಲಿ ರಜತ ಪದಕ ಗಳಿಸಿದ ಹಿನ್ನೆಲೆಯಲ್ಲಿ ಮಣಿಪುರದ ಇಂಫಾಲದ ನಾಂಗ್ಪಾಕ್ ಕಚ್ಕಿಂಗ್​ನ ಅವರ ಮನೆಯಲ್ಲಿ ಕುಟುಂಬಸದಸ್ಯರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರ ಅಣ್ಣ ಬಿಯಾಂಟ್ ಮೀಟಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಅಂದು ನಾವು ಮನೆಗೆ ಕಟ್ಟಿಗೆ ತರಲು ಹೋಗುತ್ತಿದ್ದಾಗ ಆಕೆ ಯಾರೂ ಎತ್ತಲಾಗದಷ್ಟು ಹೊರೆ ಹೊರುತ್ತಿದ್ದಳು. ನನ್ನ ತಂಗಿ ನನಗೂ ಎತ್ತಲಾಗದಷ್ಟು ಕಟ್ಟಿಗೆ ಹೊತ್ತುಕೊಂಡು ಬರುತ್ತಿದ್ದಳು. ಇಂದು ಆಕೆ ವೇಟ್​ಲಿಫ್ಟಿಂಗ್​ನಲ್ಲಿ ಬೆಳ್ಳಿಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್​ನಲ್ಲಿ ದೇಶಕ್ಕೆ ಮೊದಲ ಪದಕ ತಂದುಕೊಟ್ಟಿರುವುದು ತುಂಬಾ ಸಂತೋಷ ಎನಿಸುತ್ತಿದೆ ಎಂದು ಸಂಭ್ರಮದಿಂದ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net