ದಾಖಲೆಯ 300 ಕ್ರಿಕೆಟ್​ ಪಂದ್ಯಗಳಿಗೆ ಶಾರ್ಜಾ ಸ್ಟೇಡಿಯಂ ಆತಿಥ್ಯ!

web sharjha
Published on

ಶಾರ್ಜಾ: ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಬುಧವಾರ ನಡೆದ ಮೊದಲ ಏಕದಿನ ಪಂದ್ಯದೊಂದಿಗೆ ಶಾರ್ಜಾದ ಸ್ಟೇಡಿಯಂ, 300 ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳಿಗೆ ಆತಿಥ್ಯ ವಹಿಸಿದ ವಿಶ್ವದ ಮೊದಲ ಕ್ರೀಡಾಂಗಣ ಎಂಬ ದಾಖಲೆ ಬರೆದಿದೆ. ಶಾರ್ಜಾ ಸ್ಟೇಡಿಯಂನಲ್ಲಿ ಇದು 252ನೇ ಏಕದಿನ ಪಂದ್ಯವಾಗಿದೆ. ಇದರೊಂದಿಗೆ 38 ಟಿ20 ಮತ್ತು 10 ಟೆಸ್ಟ್​ ಪಂದ್ಯಗಳಿಗೂ ಶಾರ್ಜಾ ಆತಿಥ್ಯ ವಹಿಸಿಕೊಂಡಿದೆ.

1984ರ ಏಷ್ಯಾಕಪ್​ನಲ್ಲಿ ಶ್ರೀಲಂಕಾ-ಪಾಕಿಸ್ತಾನ ನಡುವೆ ಇಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ನಡೆದಿತ್ತು. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಶಾರ್ಜಾದಲ್ಲಿ 7 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. 1998ರಲ್ಲಿ ಆಸೀಸ್​ ವಿರುದ್ಧ ಅವರು ಆಡಿದ ಅದ್ಭುತ ಆಟ "ಡೆಸರ್ಟ್​ ಸ್ಟೋಮ್​ರ್' ಎಂದೇ ಜನಪ್ರಿಯವಾಗಿದೆ. 2023ರಲ್ಲಿ ಸಚಿನ್​ 50ನೇ ಜನ್ಮದಿನದ ಹಿನ್ನೆಲೆಯಲ್ಲಿ ಸ್ಟೇಡಿಯಂನ ಒಂದು ಸ್ಟ್ಯಾಂಡ್​ಗೆ "ಸಚಿನ್​ ತೆಂಡುಲ್ಕರ್ ಸ್ಟ್ಯಾಂಡ್' ಎಂದೂ ಹೆಸರಿಡಲಾಗಿದೆ.

ಪಾಕಿಸ್ತಾನ ತಂಡ ಇಲ್ಲಿ ನಡೆದ ಪಂದ್ಯಗಳಲ್ಲಿ ಸುಮಾರು ಶೇ. 50ರಷ್ಟು ಅಂದರೆ 144 ಪಂದ್ಯಗಳಲ್ಲಿ ಆಡಿದೆ. ಶ್ರೀಲಂಕಾ 87 ಮತ್ತು ಭಾರತ 72 ಪಂದ್ಯಗಳನ್ನು ಆಡಿದೆ. ಈ ಪೈಕಿ 35ರಲ್ಲಿ ಗೆದ್ದಿರುವ ಭಾರತ, 2000ದಲ್ಲಿ ಕೊನೆಯದಾಗಿ ಇಲ್ಲಿ ಆಡಿದೆ. ಆಸ್ಟ್ರೆಲಿಯಾದ ಸಿಡ್ನಿ ಸ್ಟೇಡಿಯಂ 291 (112 ಟೆಸ್ಟ್​, 161 ಏಕದಿನ, 18 ಟಿ20) ಆತಿಥ್ಯ ವಹಿಸಿರುವುದು ನಂತರದ ಗರಿಷ್ಠವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net