ಲಾರ್ಡ್ಸ್ ಸವಾಲಿಗೆ ಭಾರತ ಸಜ್ಜು, ಇಂದಿನಿಂದ ಆಂಗ್ಲರೆದುರು 2ನೇ ಟೆಸ್ಟ್ ಪಂದ್ಯ

team india web
Published on

ಲಂಡನ್: ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿನ ಸುವರ್ಣಾವಕಾಶಕ್ಕೆ ಮಳೆ ತಣ್ಣೀರೆರಚಿತ್ತು. ಇದೀಗ ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ನಲ್ಲೂ ಅಂಥದ್ದೇ ದಿಟ್ಟ ನಿರ್ವಹಣೆ ತೋರಿ ಸರಣಿಯಲ್ಲಿ ಮುನ್ನಡೆ ಸಂಪಾದಿಸಲು ವಿರಾಟ್ ಕೊಹ್ಲಿ ಪಡೆ ತುದಿಗಾಲಲ್ಲಿ ನಿಂತಿದೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಗುರುವಾರ ಆರಂಭವಾಗಲಿರುವ ಪಂದ್ಯದಲ್ಲಿ ಉಭಯ ತಂಡಗಳೂ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಖಚಿತವೆನಿಸಿದೆ.

ನಾಟಿಂಗ್‌ಹ್ಯಾಂನಲ್ಲಿ ಅಂತಿಮ ದಿನ ಮಳೆ ಕಾಡದಿದ್ದರೆ ಭಾರತ ತಂಡವೇ ಗೆಲ್ಲುತ್ತಿತ್ತು ಎಂಬುದು ಅಭಿಮಾನಿಗಳ ದೃಢನಂಬಿಕೆ. ಆದರೂ ಭಾರತ ತಂಡದ ಬ್ಯಾಟಿಂಗ್ ವಿಭಾಗದ ಬಗ್ಗೆ ಅನುಮಾನಗಳು ಇದ್ದೇ ಇತ್ತು. ಇದಕ್ಕೆ ಕಾರಣ ಮೊದಲ ಇನಿಂಗ್ಸ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಕಂಡಿದ್ದ ದಯನೀಯ ವೈಫಲ್ಯ. 2ನೇ ಟೆಸ್ಟ್‌ನಲ್ಲಾದರೂ ಭಾರತ ಗೆಲುವು ಕಾಣಬೇಕಾದರೆ, ಬ್ಯಾಟಿಂಗ್ ವಿಭಾಗದಿಂದ ಇನ್ನಷ್ಟು ಸದೃಢ ನಿರ್ವಹಣೆಯ ಅಗತ್ಯವಿದೆ. ಕನ್ನಡಿಗ ಕೆಎಲ್ ರಾಹುಲ್ ಹೊರತಾಗಿ ಇತರ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನಿಂಗ್ಸ್ ಆಡುವ ಲಕ್ಷಣ ತೋರಿರಲಿಲ್ಲ. ಕಳೆದ ಕೆಲ ಸಮಯದಿಂದ ಭಾರತಕ್ಕೆ ಬೃಹತ್ ಮೊತ್ತ ಮರೀಚಿಕೆಯಾಗಿಯೇ ಉಳಿದಿದೆ.

ಶಾರ್ದೂಲ್ ಔಟ್, ಅಶ್ವಿನ್ ಇನ್?

ಮೊದಲ ಟೆಸ್ಟ್‌ನಲ್ಲಿ ಆಡಿದ್ದ ವೇಗಿ ಶಾರ್ದೂಲ್ ಠಾಕೂರ್ ಸ್ನೇಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದು, 2ನೇ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಇದರಿಂದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಮತ್ತೆ ಆಡುವ ಬಳಗಕ್ಕೆ ಮರಳುವ ನಿರೀಕ್ಷೆ ಇದೆ. ನಾಟಿಂಗ್‌ಹ್ಯಾಂನಲ್ಲಿ ಪ್ರತಿ ಇನಿಂಗ್ಸ್‌ನಲ್ಲಿ ತಲಾ 2ರಂತೆ ಒಟ್ಟು 4 ವಿಕೆಟ್ ಕಬಳಿಸಿದ್ದ ಶಾರ್ದೂಲ್, ಫಿಟ್ನೆಸ್ ಸಮಸ್ಯೆಯಿಂದಾಗಿ 2ನೇ ಇನಿಂಗ್ಸ್‌ನಲ್ಲಿ ಕೇವಲ 13 ಓವರ್ ಎಸೆದಿದ್ದರು. ಇದೀಗ ಅಶ್ವಿನ್ ಅಲ್ಲದಿದ್ದರೆ, ಅನುಭವಿ ವೇಗಿಗಳಾದ ಇಶಾಂತ್ ಶರ್ಮ ಅಥವಾ ಉಮೇಶ್ ಯಾದವ್, ಶಾರ್ದೂಲ್ ಸ್ಥಾನದಲ್ಲಿ ಆಡುವ ಸಾಧ್ಯತೆ ಇದೆ.

ಟೀಮ್ ನ್ಯೂಸ್:

ಭಾರತ: ಓರ್ವ ಸ್ಪಿನ್ ಬೌಲಿಂಗ್ ಆಲ್ರೌಂಡರ್ (ರವೀಂದ್ರ ಜಡೇಜಾ) ಮತ್ತು ನಾಲ್ವರು ವೇಗಿಗಳನ್ನು ಆಡಿಸುವ ‘ಟೆಂಪ್ಲೆಟ್’ ಸರಣಿಯುದ್ದಕ್ಕೂ ಮುಂದುವರಿಯಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಬಳಿಕ ಹೇಳಿದ್ದರು. ಆದರೆ ಇದೀಗ ಶಾರ್ದೂಲ್ ಠಾಕೂರ್ ಗಾಯದಿಂದಾಗಿ ಈ ಟೆಂಪ್ಲೆಟ್ ಬದಲಾಗಬಹುದೇ ಎಂಬ ಅನುಮಾನ ಮೂಡಿದೆ. ಟೆಂಪ್ಲೆಟ್ ಬದಲಾದರೆ ಅಶ್ವಿನ್ 2ನೇ ಸ್ಪಿನ್ನರ್ ಆಗಿ ಕಣಕ್ಕಿಳಿಯಬಹುದು. ಇಲ್ಲದಿದ್ದರೆ ಇಶಾಂತ್ ಶರ್ಮ ಅಥವಾ ಉಮೇಶ್ ಯಾದವ್ ಸ್ಥಾನ ಸಂಪಾದಿಸಲಿದ್ದಾರೆ. ಮೊದಲ ಟೆಸ್ಟ್‌ಗೆ ಮುನ್ನ ತಲೆಗೆ ಚೆಂಡೇಟು ತಿಂದು ಕನ್‌ಕಷನ್‌ಗೆ ಒಳಗಾಗಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್, ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದರೂ, ಕೆಎಲ್ ರಾಹುಲ್ ಅವರೇ ಆರಂಭಿಕರಾಗಿ ಮುಂದುವರಿಯಲಿದ್ದಾರೆ.

ಇಂಗ್ಲೆಂಡ್: ಆರಂಭಿಕ ರೋರಿ ಬರ್ನ್ಸ್ ಬದಲಿಗೆ ಹಸೀಬ್ ಹಮೀದ್ ಕಣಕ್ಕಿಳಿಯುವ ಸಾಧ್ಯತೆ ಇದೆ. ನಾಟಿಂಗ್‌ಹ್ಯಾಂಶೈರ್ ಆಟಗಾರ ಹಮೀದ್ ಕಳೆದ ತಿಂಗಳು ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಇನ್ನು ವೇಗಿ ಸ್ಟುವರ್ಟ್ ಬ್ರಾಡ್ ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿರುವುದರಿಂದ ಗಂಟೆಗೆ 90 ಕಿಮೀ ವೇಗದಲ್ಲಿ ಚೆಂಡೆಸೆಯಬಲ್ಲ ಮಾರ್ಕ್ ವುಡ್ ಕಣಕ್ಕಿಳಿಯಬಹುದು. ಮತ್ತೋರ್ವ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಕೂಡ ಫಿಟ್ನೆಸ್ ಸಮಸ್ಯೆ ಎದುರಿಸಿದ್ದು, ಅವರ ಬದಲಿಗೆ ವೇಗಿ ಸಕಿಬ್ ಮಹಮೂದ್ ಆಡಬಹುದು. ಸ್ಪಿನ್ ಬೌಲಿಂಗ್ ಆಲ್ರೌಂಡರ್ ಮೊಯಿನ್ ಅಲಿ, ಬ್ಯಾಟ್ಸ್‌ಮನ್ ಡೇನಿಯಲ್ ಲಾರೆನ್ಸ್ ಬದಲಿಗೆ ಆಡುವ ನಿರೀಕ್ಷೆ ಇದೆ.

ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸೋನಿ ನೆಟ್‌ವರ್ಕ್

ಲಾರ್ಡ್ಸ್ ಮುಖಾಮುಖಿ: 18

ಇಂಗ್ಲೆಂಡ್: 12

ಭಾರತ: 2

ಡ್ರಾ: 4

ಪಿಚ್ ರಿಪೋರ್ಟ್

ಲಂಡನ್‌ನಲ್ಲಿ ಸದ್ಯ ಗರಿಷ್ಠ 24ರಿಂದ ಕನಿಷ್ಠ 14 ಡಿಗ್ರಿ ತಾಪಮಾನವಿದೆ. 2018ರಂತೆ ಈ ಸಲವೂ ಆತಿಥೇಯರು ಗ್ರೀನ್‌ಟಾಪ್ ಪಿಚ್ ಸಿದ್ಧಪಡಿಸುವರೇ ಎಂಬ ಕುತೂಹಲವಿದೆ. ಅಂದಿನ ಪಿಚ್‌ನಲ್ಲಿ ಭಾರತ ಎರಡೇ ದಿನಗಳಲ್ಲಿ 2 ಬಾರಿ ಆಲೌಟ್ ಆಗಿತ್ತು. ಒಂದು ವೇಳೆ ಪಿಚ್ ಶುಷ್ಕವಾಗಿದ್ದರೆ ಭಾರತ ಅಶ್ವಿನ್-ಜಡೇಜಾ ಇಬ್ಬರನ್ನೂ ಆಡಿಸುವ ಧೈರ್ಯ ತೋರಬಹುದು. ಅಲ್ಲದೆ ಅಂತಿಮ ದಿನ ಸ್ಪಿನ್ನರ್‌ಗಳೇ ಮಹತ್ವದ ಪಾತ್ರ ನಿರ್ವಹಿಸಬಹುದು. ಪಂದ್ಯದ ವೇಳೆ ಮೋಡ ಕವಿದ ವಾತಾವರಣವಿದ್ದರೂ, ಆಟಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ.

5: ಅಶ್ವಿನ್ (413) ಪಂದ್ಯದಲ್ಲಿ ಕಣಕ್ಕಿಳಿದು 5 ವಿಕೆಟ್ ಗಳಿಸಿದರೆ, ಹರ್ಭಜನ್ ಸಿಂಗ್ (417) ಅವರನ್ನು ಹಿಂದಿಕ್ಕಿ ಭಾರತದ 3ನೇ ಗರಿಷ್ಠ ವಿಕೆಟ್ ಸಾಧಕ ಎನಿಸಲಿದ್ದಾರೆ. ಅನಿಲ್ ಕುಂಬ್ಳೆ (619) ಮತ್ತು ಕಪಿಲ್ ದೇವ್ (434) ಮೊದಲೆರಡು ಸ್ಥಾನದಲ್ಲಿದ್ದಾರೆ.

ಶೇ. 40 ದಂಡ, 2 ಅಂಕ ಕಡಿತ!

ಮೊದಲ ಟೆಸ್ಟ್ ಪಂದ್ಯದ ನಿಧಾನಗತಿ ಓವರ್‌ಗಾಗಿ ಭಾರತ-ಇಂಗ್ಲೆಂಡ್ ತಂಡಗಳ ಆಟಗಾರರಿಗೆ ಐಸಿಸಿ, ಪಂದ್ಯ ಸಂಭಾವನೆಯ ಶೇ. 40 ದಂಡ ವಿಧಿಸಿದೆ. ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಉಭಯ ತಂಡಗಳ ತಲಾ 2 ಅಂಕ ಕಡಿತಗೊಳಿಸಲಾಗಿದೆ. ಮೊದಲ ಟೆಸ್ಟ್ ಡ್ರಾಗೊಂಡ ಬಳಿಕ ಉಭಯ ತಂಡಗಳು ತಲಾ 4 ಅಂಕ ಹಂಚಿಕೊಂಡಿದ್ದವು. ಇದೀಗ ಈ ಅಂಕ 2ಕ್ಕೆ ಇಳಿದಿದೆ. ನಾಟಿಂಗ್‌ಹ್ಯಾಂ ಟೆಸ್ಟ್‌ನಲ್ಲಿ ಉಭಯ ತಂಡಗಳು ತಲಾ 2 ಓವರ್ ಹಿಂದುಳಿದಿದ್ದವು ಎಂದು ಪರಿಗಣಿಸಿ ಐಸಿಸಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್, ಪ್ರತಿ ಓವರ್‌ಗೆ ಶೇ. 20ರಂತೆ ದಂಡ ಶಿಕ್ಷೆ ವಿಧಿಸಿದ್ದಾರೆ.

ಕೊಹ್ಲಿ ಕುಸಿತ, ಬುಮ್ರಾಗೆ ಬಡ್ತಿ

ಮೊದಲ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ 4ರಿಂದ 5ನೇ ಸ್ಥಾನಕ್ಕೆ ಕುಸಿದಿದ್ದರೆ, 5 ವಿಕೆಟ್ ಗೊಂಚಲು ಪಡೆದು ಮಿಂಚಿದ್ದ ವೇಗಿ ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ 9ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ್ದ ಸಾಧನೆಗಾಗಿ ಬುಮ್ರಾ 10 ಸ್ಥಾನ ಬಡ್ತಿ ಪಡೆದು ಅಗ್ರ 10ಕ್ಕೆ ಮರಳಿದ್ದಾರೆ. 2019ರಲ್ಲಿ 3ನೇ ಸ್ಥಾನ ಗಳಿಸಿದ್ದು, ಬುಮ್ರಾರ ಜೀವನಶ್ರೇಷ್ಠ ಸಾಧನೆಯಾಗಿದೆ. ರೋಹಿತ್ ಶರ್ಮ ಮತ್ತು ರಿಷಭ್ ಪಂತ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ಕ್ರಮವಾಗಿ 6 ಮತ್ತು 7ನೇ ಸ್ಥಾನ ಕಾಯ್ದುಕೊಂಡಿದ್ದಾರೆ. 2019ರ ಆಗಸ್ಟ್ ಬಳಿಕ ಮೊದಲ ಟೆಸ್ಟ್ ಆಡಿದ ಕನ್ನಡಿಗ ಕೆಎಲ್ ರಾಹುಲ್ 56ನೇ ಸ್ಥಾನದೊಂದಿಗೆ ಟೆಸ್ಟ್ ರ‌್ಯಾಂಕಿಂಗ್‌ಗೆ ಮರಳಿದ್ದಾರೆ. ರವೀಂದ್ರ ಜಡೇಜಾ ಆಲ್ರೌಂಡರ್ ರ‌್ಯಾಂಕಿಂಗ್‌ನಲ್ಲಿ 3ರಿಂದ 2ನೇ ಸ್ಥಾನಕ್ಕೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net