

ಚೆನ್ನೈ: ಭಾರತದ ಒಲಿಂಪಿಯನ್ ಆಟಗಾರ ಅಚಂತ್ ಶರತ್ ಕಮಲ್ ವೃತ್ತಿಪರ ಟೇಬಲ್ ಟೆನಿಸ್‌ನಿಂದ ನಿವೃತ್ತಿ ಹೊಂದಲು ಸಜ್ಜಾಗಿದ್ದಾರೆ. ಮಾರ್ಚ್ 25ರಿಂದ 30ರವರೆಗೆ ಚೆನ್ನೈನಲ್ಲಿ ನಡೆಯಲಿರುವ ವಿಶ್ವ ಟೇಬಲ್ ಟೆನಿಸ್ (ಡಬ್ಲುೃಟಿಟಿ) ಸ್ಟಾರ್ ಕಂಟೆಂಡರ್ ಟೂರ್ನಿಯಲ್ಲಿ 42 ವರ್ಷದ ಶರತ್ ಕೊನೆಯದಾಗಿ ಕಾಣಿಸಿಕೊಳ್ಳಲಿದ್ದಾರೆ.
22 ವರ್ಷಗಳ ವೃತ್ತಿಜೀವನದಲ್ಲಿ ಐದು ಒಲಿಂಪಿಕ್ಸ್ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಹೆಗ್ಗಳಿಕೆ ಹೊಂದಿರುವ ಶರತ್ ಕಮಲ್, ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಅವಳಿ ಪದಕ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಜತೆಯಾಗಿ ಭಾರತದ ಪುರುಷ ಧ್ವಜಧಾರಿಯಾಗಿದ್ದರು.
ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್‌ನ ಐದು ಆವೃತ್ತಿಗಳಲ್ಲಿ ಒಟ್ಟು 13 ಪದಕ ಜಯಿಸಿರುವ ಶರತ್ ಕಮಲ್, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಏಳು ಸ್ವರ್ಣ ಪದಕ ಜಯಿಸಿದ್ದಾರೆ. ಪ್ರಸ್ತುತ ವಿಶ್ವ ಟಿಟಿ ರ‌್ಯಾಂಕಿಂಗ್‌ನಲ್ಲಿ 42 ಸ್ಥಾನದಲ್ಲಿರುವ ಶರತ್ ಈಗಲೂ ಭಾರತದ ಅಗ್ರ ಶ್ರೇಯಾಂಕಿತ ಟಿಟಿ ಆಟಗಾರರಾಗಿದ್ದಾರೆ. 2004ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪದಕ ಒಲಿಸಿಕೊಂಡಿದ್ದ ಶರತ್, ದಾಖಲೆಯ 10 ಬಾರಿ ರಾಷ್ಟ್ರೀಯ ಟಿಟಿ ಚಾಂಪಿಯನ್ ಎನಿಸಿದ್ದಾರೆ. 2003ರಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದ್ದರು. ಜತೆಗೆ ಐಟಿಟಿಎ್ ಪ್ರೊ ಟೂರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎನಿಸಿದ್ದಾರೆ.
2006ರ ಮೆಲ್ಬೋನ್ ಕ್ರೀಡಾಕೂಟದಲ್ಲಿ ಪುರುಷರ ಸಿಂಗಲ್ಸ್ ಮತ್ತು ಪುರುಷರ ತಂಡ ವಿಭಾಗದಲ್ಲಿ ಚಿನ್ನ, 2022ರ ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟದಲ್ಲಿ ನಾಲ್ಕು ಪದಕಗಳಿಗೆ (ಪುರುಷರ ಸಿಂಗಲ್ಸ್, ಪುರುಷರ ತಂಡ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಮತ್ತು ಪುರುಷರ ತಂಡ ಸ್ಪರ್ಧೆಗಳಲ್ಲಿ ಬೆಳ್ಳಿ) ಕೊರಳೊಡ್ಡಿದ್ದಾರೆ. ವಿಶ್ವ ರ‌್ಯಾಂಕಿಂಗ್‌ನಲ್ಲಿ 30ನೇ ಸ್ಥಾನಕ್ಕೇರಿದ್ದು, ಅವರ ಅತ್ಯುತ್ತಮ ಸಾಧನೆ ಆಗಿದೆ.
ಶರತ್ ಕಮಲ್ ಕ್ರೀಡಾ ಸಾಧನೆಗಾಗಿ 2004ರಲ್ಲಿ ಅರ್ಜುನ, 2019ರಲ್ಲಿ ಪದ್ಮಶ್ರೀ ಮತ್ತು 2022ರಲ್ಲಿ ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ತೆಲುಗು ಮಾತನಾಡುವ ಕುಟುಂಬದಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಶರತ್, 4ನೇ ವಯಸ್ಸಿನಲ್ಲೇ ಟಿಟಿ ಆಡಲಾರಂಭಿಸಿದ್ದರು. ಅವರ ತಂದೆ ಅಚಂತ ಶ್ರೀನಿವಾಸ್ ರಾವ್ ರಾಜ್ಯಮಟ್ಟದ ಆಟಗಾರ ಮತ್ತು ರಾಷ್ಟ್ರೀಯ ಟಿಟಿ ಕೋಚ್ ಆಗಿದ್ದರು. 16ನೇ ವಯಸ್ಸಿನಲ್ಲೇ ಶರತ್ ವೃತ್ತಿಪರ ಟಿಟಿ ಆಟಗಾರರಾಗಿದ್ದರು.