

ಲಂಡನ್: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನೆ ಅವರಿಗೆ ಕೋವಿಡ್ -19 ಕಾಣಿಸಿಕೊಂಡಿದ್ದು, ಸದ್ಯ ಐಸೋಲೇಷನ್‌ನಲ್ಲಿ ಇರಲು ಸೂಚಿಸಲಾಗಿದೆ. ‘ದ ಹಂಡ್ರೆಡ್’ ಟೂರ್ನಿಯ ಲಂಡನ್ ಸ್ಪಿರಿಟ್ಸ್ ತಂಡದ ಮುಖ್ಯಕೋಚ್ ಆಗಿರುವ ವಾರ್ನೆಗೆ ಕೋವಿಡ್ ಕಾಣಿಸಿಕೊಂಡಿದೆ. ತಂಡದ ಮತ್ತೋರ್ವ ಸದಸ್ಯನಿಗೂ ಕೋವಿಡ್ ಕಾಣಿಸಿಕೊಂಡಿದ್ದು, ಹೆಸರು ಬಹಿರಂಗಗೊಳಿಸಿಲ್ಲ ಎಂದು ಕ್ರಿಕೆಟ್ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಭಾನುವಾರ ಬೆಳಗ್ಗೆ ವಾರ್ನೆ ಜ್ವರದಿಂದ ಬಳಲುತ್ತಿದ್ದರು, ಬಳಿಕ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟಿದೆ. ಕಡೇ 10 ದಿನದಲ್ಲಿ ಹ ಹಂಡ್ರೆಡ್ ಟೂರ್ನಿಯಲ್ಲಿ ಕೋವಿಡ್ ಕಾಣಿಸಿಕೊಂಡ ಎರಡನೇ ಮುಖ್ಯಕೋಚ್ ಇವರಾಗಿದ್ದಾರೆ. ಇದರೊಂದಿಗೆ ಚೊಚ್ಚಲ ಆವೃತ್ತಿಯ ದ ಹಂಡ್ರೆಡ್ ಟೂರ್ನಿಗೆ ಕರೊನಾಂತಕ ಕಾಡುತ್ತಿದೆ.
ಕೋಚ್ ಶೇನ್ ವಾರ್ನೆಗೆ ಮಾತ್ರ ಕೋವಿಡ್ ಕಾಣಿಸಿಕೊಂಡಿದ್ದು, ತಂಡದ ಉಳಿದ ಆಟಗಾರರಿಗೆ ಯಾವುದೇ ಲಕ್ಷಣ ಕಂಡಿಬಂದಿಲ್ಲ ಎನ್ನಲಾಗಿದೆ. 51ವರ್ಷದ ವಾರ್ನೆ 145 ಟೆಸ್ಟ್ ಪಂದ್ಯಗಳಿಂದ 708 ವಿಕೆಟ್ ಕಬಳಿಸಿದ್ದಾರೆ. 1992 ರಿಂದ 2007ರವರೆಗೂ ಆಸ್ಟ್ರೇಲಿಯಾ ತಂಡದ ಪ್ರಮುಖ ಭಾಗವಾಗಿದ್ದರು. ಇದಕ್ಕೂ ಮೊದಲು ಟ್ರೆಂಟ್ ರಾಕೆಟ್ಸ್ ತಂಡದ ಮುಖ್ಯಕೋಚ್ ಆಂಡಿ ಫ್ಲವರ್ ಗೆ ಪಾಸಿಟಿವ್ ಕಾಣಿಸಿಕೊಂಡಿತ್ತು. ಇದರಿಂದಾಗಿ ಕಡೇ ಮೂರು ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ವಾರ್ನೆ ಅನುಪಸ್ಥಿತಿಯಲ್ಲಿ ಡೇವಿಡ್ ರಿಪ್ಲೆ, ಸ್ಪಿರಿಟ್ಸ್ ತಂಡದ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.