

ಬೆಂಗಳೂರು: ಅನುಭವಿ ವೇಗಿ ಮೊಹಮದ್ ಶಮಿ ಪೂರ್ಣ ಫಿಟ್ ಆಗದ ಕಾರಣ ಮುಂಬರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನವಂಚಿತರಾದ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿ ಮರಳಿ ಕಣಕ್ಕಿಳಿಯುವುದು ವಿಳಂಬಗೊಂಡಿದೆ. ಬುಧವಾರ ಆರಂಭವಾಗಲಿರುವ ಆತಿಥೇಯ ಕರ್ನಾಟಕ ಎದುರಿನ 4ನೇ ಸುತ್ತಿನ ರಣಜಿ ಟ್ರೋಫಿ ಪಂದ್ಯ ಹಾಗೂ ನವೆಂಬರ್ 13ರಿಂದ ಇಂದೋರ್‌ನಲ್ಲಿ ನಡೆಯಲಿರುವ ಮಧ್ಯಪ್ರದೇಶ ಎದುರಿನ ಎರಡು ಪಂದ್ಯಗಳಿಗೆ ಬಂಗಾಳ ತಂಡದಲ್ಲಿ ಶಮಿ ಸ್ಥಾನ ಪಡೆದಿಲ್ಲ.
ಬೆಂಗಳೂರಿನಲ್ಲಿ ನಡೆದ ಭಾರತ-ಕಿವೀಸ್ ಮೊದಲ ಟೆಸ್ಟ್ ಪಂದ್ಯದ ಬಳಿಕ ಸಹಾಯಕ ಕೋಚ್ ಅಭಿಷೇಕ್ ನಾಯರ್‌ಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದ ಶಮಿ, ತನ್ನ ಫಿಟ್ನೆಸ್ ಸಾಬೀತುಪಡಿಸಲು ಕರ್ನಾಟಕದ ವಿರುದ್ಧ ಕಣಕ್ಕಿಳಿಯುತ್ತಾರೆ ಎನ್ನಲಾಗಿತ್ತು. ಪಾದದ ಗಾಯದ ಶಸಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವ ಶಮಿ 2023ರ ನವೆಂಬರ್‌ನಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದಾರೆ.
ಶಮಿ ಜತೆಗೆ ಕರ್ನಾಟಕದ ವಿರುದ್ಧ ಪಂದ್ಯಕ್ಕೆ ಬಂಗಾಳ ತಂಡದ ಇತರ ಪ್ರಮುಖ ಆಟಗಾರರೂ ಅಲಭ್ಯರಾಗಿದ್ದಾರೆ. ಅವರೆಂದರೆ ಆರಂಭಿಕ ಅಭಿಮನ್ಯು ಈಶ್ವರನ್, ವಿಕೆಟ್ ಕೀಪರ್-ಬ್ಯಾಟರ್ ಅಭಿಷೇಕ್ ಪೊರೆಲ್ ಮತ್ತು ವೇಗಿ ಮುಕೇಶ್ ಕುಮಾರ್. ಇವರೆಲ್ಲರೂ ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಗೆ ಭಾರತ ಎ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಲವನೀತ್ ಬದಲಿಗೆ ಕೆಎಲ್ ಶ್ರೀಜಿತ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನವೆಂಬರ್ 6ರಿಂದ 9ರವರೆಗೆ ನಿಗದಿಯಾಗಿರುವ ಕರ್ನಾಟಕ-ಬಂಗಾಳ ವಿರುದ್ಧ ಪಂದ್ಯಕ್ಕೆ ರಾಜ್ಯದ ವಿಕೆಟ್ ಕೀಪರ್-ಬ್ಯಾಟರ್ ಲವನೀತ್ ಸಿಸೋಡಿಯಾ ಅಲಭ್ಯರಾಗಿದ್ದಾರೆ. ಗಾಯದ ಸಮಸ್ಯೆಗೆ ತುತ್ತಾಗಿರುವ ಲವನೀತ್ ಬದಲಿಗೆ 28 ವರ್ಷದ ಕೆಎಲ್ ಶ್ರೀಜಿತ್ ಸ್ಥಾನ ಸಂಪಾದಿಸಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಆಡಿದ 11 ಪಂದ್ಯಗಳಲ್ಲಿ 349 ರನ್ ಕಲೆಹಾಕಿರುವ ಶ್ರೀಜಿತ್ ಎರಡನೇ ಗರಿಷ್ಠ ರನ್ ಸ್ಕೋರರ್ ಎನಿಸಿದ್ದರು.