ಐಪಿಎಲ್​ 18: ಡೆಲ್ಲಿ ಕ್ಯಾಪಿಟಲ್ಸ್​​ಗೆ ಇಂದು ಟೈಟಾನ್ಸ್​ ಚಾಲೆಂಜ್​

New Project
Published on

ನವದೆಹಲಿ: ಆರಂಭಿಕ ಪಂದ್ಯಗಳ ಗೆಲುವಿನ ನಂತರ ಲಯತಪ್ಪಿರುವ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ  ಗುಜರಾತ್​ ಟೈಟಾನ್ಸ್​ ತಂಡಗಳು ಐಪಿಎಲ್​ 18ನೇ ಆವೃತ್ತಿಯಲ್ಲಿ ಮರು ಮುಖಾಮುಖಿ ಆಗಲಿವೆ. ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಮಹತ್ವದಾಗಿದೆ. ಹಿಂದಿನ ಮುಖಾಮುಖಿಯ ಸೋಲಿಗೆ ಸೇಡು ತೀರಿಸುವ ತವಕ ಅಕ್ಷರ್​ ಪಟೇಲ್​ ಬಳಗದ್ದಾಗಿದೆ.ಟೂರ್ನಿಯ ಆರಂಭಿಕ 6ರ ಪೈಕಿ 5ರಲ್ಲಿ ಗೆಲುವು ಸಾಧಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್​, ಕಳೆದ ಏಪ್ರಿಲ್​ 19ರಂದು ಗುಜರಾತ್​ ಟೈಟಾನ್ಸ್​ ವಿರುದ್ಧ ಸೋಲಿನ ಬಳಿಕ ಆಡಿದ 3ರಲ್ಲಿ ಒಮ್ಮೆ ಮಾತ್ರ ಗೆಲುವು ಸಾಧಿಸಿದೆ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 6 ಗೆಲುವು, 4 ಸೋಲು, 1 ರದ್ದು ಸೇರಿ 13 ಅಂಕ ಕಲೆಹಾಕಿರುವ ಅಕ್ಷರ್​ ಬಳಗ ಅಂಕಪಟ್ಟಿಯ 5ನೇ ಸ್ಥಾನದಲ್ಲಿದೆ.  ಸ್ಟಾರ್​ ವೇಗಿ ಮಿಚೆಲ್​ ಸ್ಟಾರ್ಕ್​ ಗೈರಿನಲ್ಲಿ ತಂಡ ಪುಟಿದೇಳಬೇಕಿದೆ. ಇತ್ತ ಗುಜರಾತ್​ ಟೈಟಾನ್ಸ್​ ತಂಡ 11 ಪಂದ್ಯಗಳಲ್ಲಿ 8 ಜಯ, 3 ಸೋಲಿನೊಂದಿಗೆ 16 ಅಂಕ ಹೊಂದಿದ್ದು, ಇನ್ನೊಂದು ಗೆಲುವು ಪ್ಲೇಆಫ್​ ಸ್ಥಾನ ಅಧಿಕೃತಪಡಿಸಲಿದೆ.

ಉಳಿದಿರುವ ಮೂರು ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದರೆ, ಅಂಕಪಟ್ಟಿಯ ಅಗ್ರ 2ರಲ್ಲಿ ಸ್ಥಾನ ಹೊಂದುವ ಅವಕಾಶವೂ ಇದೆ. ಜತೆಗೆ ಮೊದಲ ಕ್ವಾಲಿಫೈಯರ್​ನಲ್ಲೂ ಗೆಲುವಿನ ಓಟ ವಿಸ್ತರಿಸಿದರೆ, ನೇರವಾಗಿ ಫೈನಲ್​ ಆಡುವ ಸುವರ್ಣಾವಕಾಶ ಸಿಗಲಿದೆ. ಜೋಸ್​ ಬಟ್ಲರ್​ ಹಾಗೂ ಕಗಿಸೊ ರಬಾಡ ಗುಜರಾತ್​ ತಂಡ ಸೇರಿಕೊಂಡಿದ್ದು, ಬಲ ಹೆಚ್ಚಿಸಿದೆ. ಆದರೆ ಬಟ್ಲರ್​ ಅಂತಿಮ ಲೀಗ್​ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್​ಗೆ ಮರಳಲಿದ್ದು, ಅವರ ಸ್ಥಾನ ತುಂಬಬಲ್ಲ ಸೂಕ್ತ ಆಟಗಾರನ ಆಯ್ಕೆ ಗುಜರಾತ್​ ಮುಂದಿರುವ ಸವಾಲೆನಿಸಿದೆ.

ಸಂಟಿತ ಆಟ

ಸರ್ವಾಂಗೀಣ ನಿರ್ವಹಣೆ ಗುಜರಾತ್​ ಟೈಟಾನ್ಸ್​ ತಂಡದ ಪ್ಲಸ್​ ಪಾಯಿಂಟ್​. ಅಗ್ರ ಮೂವರು ಬ್ಯಾಟರ್​ಗಳಾದ ಸಾಯಿ ಸುದರ್ಶನ್​, ಶುಭಮಾನ್​ ಗಿಲ್​, ಜೋಸ್​ ಬಟ್ಲರ್​ ತಲಾ 500ಕ್ಕೂ ಅಧಿಕ ರನ್​ ಕಲೆಹಾಕಿದ್ದಾರೆ. ಇದುವರೆಗೂ ಗುಜರಾತ್​ ಮಧ್ಯಮ ಕ್ರಮಾಂಕ್ಕೆ ಸವಾಲು ಎದುರಾಗಿಲ್ಲ. ವಿಂಡೀಸ್​ನ ಶೆಫಾರ್ನೆ ರುದರ್​ಪೋರ್ಡ್​ ಸಂಪೂರ್ಣ ಟೂರ್ನಿಗೆ ಲಭ್ಯವಾಗಲಿದ್ದು, ಶಾರುಖ್​ ಖಾನ್​ ಪರಿಣಾಮಕಾರಿ ಎನಿಸಬೇಕಿದೆ. ಬೌಲಿಂಗ್​ನಲ್ಲಿ ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ (20) ಟೂರ್ನಿಯ ಗರಿಷ್ಠ ವಿಕೆಟ್​ ಟೇಕರ್​ ಎನಿಸಿದ್ದು, ಮೊಹಮದ್​ ಸಿರಾಜ್​ (15), ಸಾಯಿ ಕಿಶೋರ್​ (14) ಸಮರ್ಥ ಬೆಂಬಲ ನೀಡಿದ್ದಾರೆ. ರಶೀದ್​ ಖಾನ್​ ಲಯಕ್ಕೆ ಮರಳಿದರೆ, ಡೆಲ್ಲಿ ಬ್ಯಾಟರ್​ಗಳಿಗೆ ನೈಜ ಸವಾಲು ಎದುರಾಗಲಿದೆ.

ಬಲ ಕಳೆದುಕೊಂಡ

ಬೌಲಿಂಗ್​ ವಿಭಾಗ

ಧರ್ಮಶಾಲಾದಲ್ಲಿ ನಡೆದ ಬ್ಲ್ಯಾಕ್​ಔಟ್​ ಘಟನೆಯಿಂದ ವೇಗಿ ಮಿಚೆಲ್​ ಸ್ಟಾರ್ಕ್​ ಐಪಿಎಲ್​ಗೆ ಮರಳಲು ಹಿಂದೇಟು ಹಾಕಿದ್ದಾರೆ. ಇದರ ಜತೆಗೆ ​ಮೆಕ್​ಗುರ್ಕ್​, ಡೋನ್ನಾವನ್​ ಫೇರಿರಾ ಅಲಭ್ಯತೆ ಡೆಲ್ಲಿಗೆ ದೊಡ್ಡ ಹಿನ್ನಡೆ ತಂದಿದೆ. ಜತೆಗೆ ಲೀಗ್​ ಪಂದ್ಯಗಳ ಬಳಿಕ ಟ್ರಿಸ್ಟಾನ್​ ಸ್ಟಬ್ಸ್​ ಸಹ ತವರಿಗೆ ಮರಳುವುದರಿಂದ ಅಕ್ಷರ್​ ಪಡೆ ಮುನ್ನವೇ ಒತ್ತಡದಲ್ಲಿ ಸಿಲುಕಿದೆ. ಸ್ಟಾರ್ಕ್​ ಅಲಭ್ಯತೆಯಿಂದ ಡೆಲ್ಲಿ ಬೌಲಿಂಗ್​ನ ಬಲ ಕಳೆದುಕೊಂಡಿದೆ.

ಲಂಕಾದ ದುಶ್ಮಂತ್​ ಚಮೀರಾ, ಮುಕೇಶ್​ ಕುಮಾರ್​, ಮೋಹಿತ್​ ಶರ್ಮ ಹಾಗೂ ಟಿ. ನಟರಾಜನ್​ ಅವರನ್ನೇ ಡೆಲ್ಲಿ ನೆಚ್ಚಿಕೊಂಡಿದೆ. ಬಾಂಗ್ಲಾದೇಶದ ಮುಸ್ತಾಫಿಜೂರ್​ ಬದಲಿ ಆಟಗಾರನಾಗಿ ಸೇರ್ಪಡೆಗೊಂಡರೂ ಲೀಗ್​ ಪಂದ್ಯಗಳ ನಂತರ ಟೂರ್ನಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ.

ಆರಂಭಿಕನಾಗಿ ರಾಹುಲ್​!

ಪ್ಲೇಆಫ್ ಅವಕಾಶ ವೃದ್ಧಿಸಿಕೊಳ್ಳಲು ಡೆಲ್ಲಿ ಅಗ್ರ ಕ್ರಮಾಂಕ ಸ್ಥಿರ ನಿರ್ವಹಣೆ ತೋರಬೇಕಿದ್ದು, ಬ್ಯಾಟಿಂಗ್​ ಕ್ರಮಾಂಕದಲ್ಲಿ ಬದಲಾವಣೆ ಕಾಣುವ ಸಾಧ್ಯತೆಗಳಿವೆ. ಅನುಭವಿ, ಕನ್ನಡಿಗ ಕೆಎಲ್​ ರಾಹುಲ್​ ಡೆಲ್ಲಿ ಪರ ಇನಿಂಗ್ಸ್​ ಆರಂಭಿಸಲಿದ್ದಾರೆ ಎನ್ನಲಾಗಿದೆ. ಟೂರ್ನಿಯಲ್ಲಿ ಇದುವರೆಗೆ ಹಲವು ಕ್ರಮಾಂಕದಲ್ಲಿ ಬ್ಯಾಟ್​ ಬೀಸಿರುವ ರಾಹುಲ್​, ಒಮ್ಮೆ ಆರಂಭಿಕನಾಗಿಯೂ ಆಡಿದ್ದಾರೆ. 2 ಬಾರಿ 3ನೇ ಕ್ರಮಾಂಕ ಮತ್ತು ಏಳು ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ್ದಾರೆ.

ಮುಖಾಮುಖಿ: 6

ಗುಜರಾತ್​; 3

ಡೆಲ್ಲಿ: 3

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net