ಅಮ್ಮನ ಮಾತು ಕೇಳಿ ಬೆಂಗಳೂರಿಗೆ ಬಂದಿದ್ದಕ್ಕೇ ಪದಕ ಒಲಿಯಿತು ಎಂದ ಶೈಲಿ ಸಿಂಗ್

shaili singh gor web
Published on

ನವದೆಹಲಿ: ಲಾಂಗ್‌ಜಂಪ್ ತರಬೇತಿಗಾಗಿ ಬೆಂಗಳೂರಿಗೆ ತೆರಳಲು ತಾಯಿ ಕೊಟ್ಟ ಆತ್ಮವಿಶ್ವಾಸವೇ ದೊಡ್ಡ ಸ್ಫೂರ್ತಿ ಎಂದು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ ಶೈಲಿ ಸಿಂಗ್ ಹೇಳಿದ್ದಾರೆ. ಬೆಂಗಳೂರಿನಲ್ಲಿರುವ ಅಂಜು ಬಾಬಿ ಜಾರ್ಜ್ ಅಕಾಡೆಮಿಗೆ ಸೇರಿಕೊಳ್ಳಲು ನನ್ನ ತಾಯಿ ಹೇಳಿದ ಸ್ಫೂರ್ತಿಯುತ ಮಾತುಗಳೇ ಪ್ರೇರಣೆಯಾಯಿತು. ಬೆಂಗಳೂರಿಗೆ ತೆರಳದಂತೆ ಹಲವು ಮಂದಿ ನನಗೆ ಸಲಹೆ ನೀಡಿದ್ದರು. ಹೆಣ್ಣುಮಗಳು ಅಷ್ಟು ದೊಡ್ಡ ನಗರಕ್ಕೆ ಹೋಗುವುದು ಸೂಕ್ತವಲ್ಲ ಎಂದೆಲ್ಲಾ ಹೇಳಿದ್ದರು. ಈ ವೇಳೆ ನನ್ನ ತಾಯಿ ವಿನಿತಾ ಧೈರ್ಯ ತುಂಬಿದರು ಎಂದು ಉತ್ತರ ಪ್ರದೇಶದ ಜಾನ್ಸಿ ಜಿಲ್ಲೆಯವರಾದ 17 ವರ್ಷದ ಶೈಲಿ ತಿಳಿಸಿದ್ದಾರೆ. ಶೈಲಿ ಸಿಂಗ್ ತಾಯಿ ವಿನಿತಾ, ವೃತ್ತಿಯಲ್ಲಿ ಟೈಲರ್ ಆಗಿದ್ದು, ಪತಿಯನ್ನು ಕಳೆದುಕೊಂಡ ಬಳಿಕ ಮೂವರು ಮಕ್ಕಳ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

‘ಅಥ್ಲೆಟಿಕ್ಸ್‌ನ ಆರಂಭಿಕ ದಿನಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸಿದೆ. ಅಂಜು ಮೇಡಂ ಫೋನ್ ಮಾಡಿ ತರಬೇತಿಗೆ ಬರುವಂತೆ ಆಹ್ವಾನ ನೀಡಿದರು. ಈ ವೇಳೆ ಎಲ್ಲರೂ ವಿರೋಧ ವ್ಯಕ್ತಪಡಿಸಿದರು. ಆದರೆ, ನನ್ನ ತಾಯಿ ಮಾತ್ರ ಅವಳು ನನ್ನ ಮಗಳು, ಅವಳು ಏನೆಂದು ನನಗೆ ಗೊತ್ತು ಎಂದು ತಿಳಿ ಹೇಳಿ ಬೆಂಗಳೂರಿಗೆ ಕಳುಹಿಸಿದರು’ ಎಂದು ಶೈಲಿ ಹೇಳಿಕೊಂಡಿದ್ದಾರೆ. ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶೈಲಿ ಸಿಂಗ್ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಕೇವಲ 1 ಸೆಂಟಿಮೀಟರ್‌ನಿಂದ ಸ್ವರ್ಣ ಪದಕ ತಪ್ಪಿಸಿಕೊಂಡಿದ್ದರು.

2017ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಅಂತರ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶೈಲಿ ಸಿಂಗ್ ಅವರ ನಿರ್ವಹಣೆಯನ್ನು ಗಮನಿಸಿದ ಕೋಚ್ ರಾಬರ್ಟ್ ಜಾರ್ಜ್, ತಮ್ಮ ಅಕಾಡೆಮಿಗೆ ತರಬೇತಿಗೆ ಸೇರುವಂತೆ ಆಹ್ವಾನ ನೀಡಿದರು. 2018ರಿಂದ ಅಂಜು ಮೇಡಂ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವೆ ಎಂದು ಶೈಲಿ ವಿವರಿಸಿದರು. ಬೆಂಗಳೂರಿನ ಸೇಂಟ್ ಪ್ಯಾಟ್ರಿಕ್ಸ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾರೆ. ಕೂಟದ ಹಿನ್ನೆಲೆಯಲ್ಲಿ ಪರೀಕ್ಷೆಗಳಿಗೆ ಗೈರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net