

ಪಾಕಿಸ್ತಾನ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಟಿ-20ಐ ಕ್ಯಾಪ್ಟನ್ಸಿಯಿಂದ ಅನೌಪಚಾರಿಕವಾಗಿ ವಜಾಗೊಳಿಸಿದ ಒಂದು ವಾರದ ಬಳಿಕ ಪಾಕಿಸ್ತಾನ ತಂಡದ ವೇಗಿ ಶಾಹೀನ್ ಅಫ್ರಿದಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪರೋಕ್ಷವಾಗಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಈ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ನೀಡಿದ ನಿರಾಶಾದಾಯಕ ಪ್ರದರ್ಶನದ ಬೆನ್ನಲ್ಲೇ ಬಾಬರ್ ಅಜಮ್ ತಮ್ಮ ನಾಯಕತ್ವದ ಜವಾಬ್ದಾರಿಯನ್ನು ತ್ಯಜಿಸಿ, ಕ್ಯಾಪ್ಟನ್ ಸ್ಥಾನ ಬೇಡ ಎಂದು ಹಿಂದೆ ಸರಿದಿದ್ದರು. ತದನಂತರ ಶಾಹೀನ್ ಅಫ್ರಿದಿ ಪಾಕಿಸ್ತಾನದ ಟಿ-20 ತಂಡದ ನಾಯಕತ್ವವನ್ನು ವಹಿಸಿಕೊಂಡರು. ಶಾನ್ ಮಸೂದ್ ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಲಾಯಿತು.
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯೊಂದಿಗೆ ತಮ್ಮ ಟಿ-20 ಕ್ಯಾಪ್ಟನ್ಸಿಯನ್ನು ಪ್ರಾರಂಭಿಸಿದ ಅಫ್ರಿದಿ, ಕಿವೀಸ್ ವಿರುದ್ಧ ಪಾಕಿಸ್ತಾನ 4-1 ಅಂತರದಲ್ಲಿ ಸರಣಿ ಸೋತಿದ್ದರು. ಅದಾದ ಬಳಿಕ 2024ರ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿ ಮತ್ತು ವಿಶ್ವಕಪ್ 2024ಕ್ಕೂ ಮುನ್ನ ಬಾಬರ್ ಅಜಮ್ರನ್ನು ವೈಟ್ಬಾಲ್ ನಾಯಕನಾಗಿ ಮರು ನೇಮಕಗೊಳಿಸಿದ್ದರಿಂದ ಕೊಂಚ ಅಪಸ್ವರ ಭುಗಿಲೆದ್ದಿದೆ.
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕ್ರಿಪ್ಟಿಕ್ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಶಾಹೀನ್ ಅಫ್ರಿದಿ, ತನ್ನನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಾಯಕತ್ವದಿಂದ ವಜಾಗೊಳಿಸುವ ನಿರ್ಧಾರದ ಬಗ್ಗೆ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಾನು ಎಷ್ಟು ಕ್ರೂರಿ ಮತ್ತು ನಿರ್ದಯ ಎಂಬುದನ್ನು ಸಾಬೀತು ಮಾಡುವಂತೆ ಮಾಡಬೇಡಿ. ಆ ಸ್ಥಾನದಲ್ಲಿ ನನ್ನನ್ನು ಎಂದಿಗೂ ಇರಿಸಬೇಡಿ. ನನ್ನ ತಾಳ್ಮೆಯನ್ನು ಪರೀಕ್ಷಿಸಬೇಡಿ. ಏಕೆಂದರೆ ನೀವು ಭೇಟಿಯಾದ ವ್ಯಕ್ತಿಗಳಲ್ಲಿ ತುಂಬ ಸಾಫ್ಟ್ ಮತ್ತು ಸ್ವೀಟೆಸ್ಟ್ ವ್ಯಕ್ತಿ ನಾನು. ಒಂದು ಸಲ ನನ್ನ ಲಿಮಿಟ್ ನಾನು ಕಳೆದುಕೊಂಡ್ರೆ, ನೀವು ಊಹಿಸಲು ಸಾಧ್ಯವಿಲ್ಲ ಅಂತಹ ಕೆಲಸವನ್ನು ಮಾಡ್ತೀನಿ" ಎಂದಿದ್ದಾರೆ.
ಸದ್ಯ ಆಫ್ರಿದಿ ಮಾಡಿರುವ ಈ ಒಂದು ಪೋಸ್ಟ್ ಪಾಕಿಸ್ತಾನ ಕ್ರಿಕೆಟ್ನಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).